ದಿನೇ ದಿನೇ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸರ್ಕಾರವು ವಿಧಿಸಿರುವ ನಿಬಂಧನೆಗಳನ್ನು ದ.ಕ ಜಿಲ್ಲೆಯಲ್ಲಿ ಈಗಾಗಲೇ ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ಎ.22 ರಿಂದ ಈವರೆಗೆ ಒಟ್ಟು 7636 ಮಾಸ್ಕ್ ಕೇಸ್, ನಿಯಮಾವಳಿಗಳನ್ನು ಉಲ್ಲಂಘಿಸಿದವರ ವಿರುದ್ಧ ಒಟ್ಟು 76 ಪ್ರಕರಣಗಳನ್ನು ದಾಖಲಿಸಲಾಗಿದೆ.
ಅನಗತ್ಯವಾಗಿ ತಿರುಗಾಡುತ್ತಿದ್ದ 840 ವಾಹನಗಳನ್ನು ಜಪ್ತಿಮಾಡಲಾಗಿದೆ. ಸರ್ಕಾರವು ಕೊರೋನಾ ರೋಗ ತಡೆಗಟ್ಟುವ ನಿಮಿತ್ತ ಅದೇಶಿಸಿರುವ ನಿಯಮಾವಳಿಗಳನ್ನು ಜೂ.07 ರವರೆಗೆ ವಿಸ್ತರಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಸದರಿ ನಿಯಮಾವಳಿಗಳ ಪಾಲನೆಯನ್ನು ನಿಗದಿತ ದಿನಾಂಕದವರೆಗೆ ಇನ್ನಷ್ಟು ಕಟ್ಟುನಿಟ್ಟಾಗಿ ಅನುಸ್ಥಾನಗೊಳಿಸಲಿದ್ದು, ಸಾರ್ವಜನಿಕರು ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಅತ್ಯಂತ ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಅನಗತ್ಯವಾಗಿ ತಿರುಗಾಡದೇ ಸರ್ಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.