ಬೆಳ್ತಂಗಡಿ: ದೇಶದಾದ್ಯಂತ ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡಿದ್ದು ಹಲವಾರು ಸಾವು, ನೋವು, ಕಷ್ಟ, ನಷ್ಟಗಳನ್ನು ಅನುಭವಿಸುತ್ತಿರುವ ಬೆನ್ನಲ್ಲೇ ಬ್ಲ್ಯಾಕ್ ಫಂಗಸ್ ವೈರಸ್ ಕೂಡಾ ದಾಳಿ ಇಟ್ಟಿದೆ.
ಇದೀಗ ಬೆಳ್ತಂಗಡಿ ತಾಲೂಕಿಗೂ ಬ್ಲಾಕ್ ಫಂಗಸ್ ವೈರಸ್ ಬಾಧೆ ತಟ್ಟಿದ್ದು, ಓರ್ವ ವ್ಯಕ್ತಿಯನ್ನು ಬಲಿ ಪಡೆದುಕೊಂಡಿದೆ. ತಾಲೂಕಿನ ತಣ್ಣೀರುಪಂತ ಗ್ರಾಮದ ಅಳಕೆ ನಿವಾಸಿ ನೋಣಯ್ಯ ಪೂಜಾರಿ (55.ವ) ಎಂಬವರು ಬ್ಲ್ಯಾಕ್ ಫಂಗಸ್ ವೈರಸ್‌ಗೆ ತುತ್ತಾಗಿ ಮೃತಪಟ್ಟಿದ್ದಾರೆ.
ನೋಣಯ್ಯ ಪೂಜಾರಿಯವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದು, ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಪರೀಕ್ಷೆ ವೇಳೆ ಇವರಿಗೆ ಕೊರೊನಾ ಸೋಂಕು ದೃಢಗೊಂಡಿದ್ದು, ಅದರ ಜೊತೆಗೆ ಬ್ಲ್ಯಾಕ್ ಫಂಗಸ್ ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೇ.27ರಂದು ಕೊನೆಯುಸಿರೆಳೆದಿದ್ದಾರೆ.
ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸಲಾಗುತ್ತಿದೆ. ಇದೀಗ ಬ್ಲಾಕ್ ಫಂಗಸ್ ವೈರಸ್ ಕೂಡ ಲಗ್ಗೆ ಇಟ್ಟಿದ್ದು, ಈ ಹಿನ್ನೆಲೆಯಲ್ಲಿ ಈ ಸಾಂಕ್ರಾಮಿಕ ರೋಗ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ.
ಈಗಾಗಲೇ ಕೊರೊನಾ ಬಾಧೆಯಿಂದ ತತ್ತಿರುಸಿರುವ ಜನರು, ಬ್ಲಾಕ್ ಫಂಗಸ್ ವೈರಸ್‌ಗೆ ಬಲಿಯಾಗುತ್ತಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ. ಚಾರ್ಮಾಡಿ, ನೆರಿಯಾ, ಕಳೆಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿದ್ದು, ನಾಗರಿಕರು ಸ್ವಯಂ ಪ್ರೇರಿತರಾಗಿ ಕೋವಿಡ್ ಮುನ್ನೆಚ್ಚರಿಕೆ ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ಸೇವಾ ಭಾರತಿ ಶ್ರಮಿಕ ಕೇಂದ್ರ ಬೆಳ್ತಂಗಡಿ ಹಾಗೂ ಬೆಳ್ತಂಗಡಿ ವಿಶ್ವಹಿಂದೂ ಪರಿಷತ್-ಬಜರಂಗದಳದ ಕಾರ್ಯಕರ್ತರಿಂದ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದರೊಂದಿಗೆ ಪಿಪಿಇ ಕಿಟ್ ಧರಿಸಿ ಮೃತರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.