ಬೆಳ್ತಂಗಡಿ : ಕೊರೊನಾದಿಂದ ಒಂದೇ ಕುಟುಂಬದ ಮೂವರು 15 ದಿನಗಳಲ್ಲಿ ಸಾವನ್ನಪ್ಪಿದ ಘಟನೆ ಉಜಿರೆ ಗ್ರಾಮದ ಗಾಂಧಿನಗರದಲ್ಲಿ ನಡೆದಿದೆ.
ಕೋವಿಡ್ ಸೋಂಕು ತಗುಲಿದ್ದ ಮನೆಯ ಯಜಮಾನ ಪುರಲ್ಲ (92) ಮೇ.13 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಇದಾದ ನಂತರ ಪುರಲ್ಲರ ಮಗಳು ಅಪ್ಪಿ (45) ಮೇ.23 ರಂದು ಮೃತಪಟ್ಟರು. ಆನಂತರ ಅಪ್ಪಿ ಪತಿ ಗುರುವ (52) ಮೇ.27 ರಂದು ಸೋಂಕಿಗೆ ಬಲಿಯಾಗಿದ್ದು, ಈ ದಂಪತಿಗಳಿಗೆ ಮಗಳು ಮತ್ತು ಮಗ ಇದ್ದಾರೆ.15 ದಿನಗಳಲ್ಲಿ ಕೊರೊನಾಗೆ ಮೂವರು ಸದಸ್ಯರನ್ನು ಕಳೆದುಕೊಂಡಿರುವುದರಿಂದ ಕುಟುಂಬವು ಶೋಕಸಾಗರದಲ್ಲಿ ಮುಳುಗಿದೆ.
ಉಜಿರೆ ಗ್ರಾಮದ ಗಾಂಧಿನಗರ ಪ್ರದೇಶದಲ್ಲಿ 50 ಕ್ಕೂ ಹೆಚ್ಚು ಮನೆಗಳಿವೆ ಮತ್ತು ಒಂದೇ ಕುಟುಂಬದಲ್ಲಿ ಮೂವರ ಸಾವು ಇಡೀ ಸಮುದಾಯಕ್ಕೆ ಆಘಾತ ಉಂಟುಮಾಡಿದೆ.ಇನ್ನು ಗಾಂಧಿನಗರದಲ್ಲಿ 30 ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ತಾಲ್ಲೂಕು ಆಡಳಿತವು ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಿವಾಸಿಗಳಿಗೆ ಅಗತ್ಯವಾದ ಸಹಾಯವನ್ನು ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.