ಮಂಗಳೂರು : ಕುಕ್ಕೆ ಸುಬ್ರಹ್ಮಣ್ಯ ಪರಿಸರ ಹಾಗೂ ಸುಳ್ಯ ತಾಲೂಕಿನ ಕೆಲವೆಡೆ ಶುಕ್ರವಾರ ಸಂಜೆ ಗುಡುಗು ಸಹಿತ ಮಳೆಯಾಗಿದೆ.
ಸುಳ್ಯ ನಗರ, ಅರಂತೋಡು, ಸಂಪಾಜೆ, ಪಂಜ, ಕರಿಕ್ಕಳ, ಕೊಲ್ಲಮೊಗ್ರು, ನಡುಗಲ್ಲು, ಹರಿಹರ ಪಳ್ಳತ್ತಡ್ಕ, ಗುತ್ತಿಗಾರು, ದೇವಚಳ್ಳ, ಮಡಪ್ಪಾಡಿ ಸೇರಿದಂತೆ ತಾಲೂಕಿನ ಹಲವೆಡೆಯ ಪರಿಸರದಲ್ಲಿ ಗುಡುಗು ಸಹಿತ ಮಳೆಯಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲೂ ಗುಡುಗು ಸಹಿತ ಮಳೆಯಾಗಿದೆ.
ಸುಳ್ಯ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ ಇತ್ತು.
ಜಿಲ್ಲೆಯಾದ್ಯಂತ ಬೆಳಗ್ಗೆ ಸುಮಾರು 10 ಗಂಟೆಯ ವರೆಗೆ ಮೋಡದಿಂದ ಕೂಡಿದ ವಾತಾವರಣ ಇತ್ತು. ಬಳಿಕ ಸೆಕೆ ಮತ್ತು ಬಿಸಿಲಿನಿಂದ ಕೂಡಿತ್ತು. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ ಎರಡು ದಿನ ಜಿಲ್ಲೆಯ ಕೆಲವು ಕಡೆ ಸಾಧಾರಣ ಮಳೆ ಸುರಿಯಬಹುದು, ಉಳಿದಂತೆ ಒಣಹವೆ ಇರಲಿದೆ.
ಮಂಗಳೂರಿನಲ್ಲಿ ಶುಕ್ರವಾರ 34.4 ಡಿ.ಸೆ. ಗರಿಷ್ಠ ಮತ್ತು 27.4 ಡಿ.ಸೆ. ಕನಿಷ್ಠ ತಾಪಮಾನ ಇತ್ತು.