ರುಚಿ ರುಚಿಯ ತಿನಿಸುಗಳೆಂದರೆ ಸಾಕು ನಮ್ಮೆಲ್ಲರ ಬಾಯಲ್ಲೂ ನೀರೂರುತ್ತದೆ. ಹುಟ್ಟುಹಬ್ಬದಿಂದ ಹಿಡಿದು ಅನೇಕ ಶುಭಾವಸರಗಳ ಸಂಭ್ರಮವನ್ನು ಹೆಚ್ಚಿಸುತ್ತದೆ ಸಿಹಿತಿನಿಸುಗಳು. ಇಂದು ಮಕ್ಕಳಾದಿಯಾಗಿ ಹಿರಿಯರವರೆಗೆ ಕೇಕ್ ಗಳು ಎಲ್ಲಾ ವಯೋಮಾನದವರನ್ನು ತನ್ನತ್ತ ಸೆಳೆಯುತ್ತವೆ. ಕೇಕ್ ಕಟ್ ಮಾಡಿ ಹುಟ್ಟಹಬ್ಬ ಆಚರಿಸುವ ಖುಷಿಯೇ ಬೇರೆ. ಇಲ್ಲೊಬ್ಬಳು ಪುತ್ತೂರಿನ ಆರ್ಯಾಪಿನಲ್ಲಿರುವ 12 ವರ್ಷದ ಬಾಲಕಿ ಕೇಕ್ ತಯಾರಿಯಲ್ಲಿ ಪರಿಣಿತಳಾಗಿದ್ದಾಳೆ.
ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ 7 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವಳ ಹೆಸರು ಮೇಧಾ ಭಟ್. ಮುರಳಿಶ್ಯಾಮ್ ಮತ್ತು ಮಾಯಾ ಮುರಳಿ ದಂಪತಿಗಳ ಸುಪುತ್ರಿಯಾದ ಮೇಧಾ ಎಳವೆಯಿಂದಲೇ ಅಡುಗೆಯಲ್ಲಿ ಆಸಕ್ತಿ ಹೊಂದಿದ್ದಳು. ತನ್ನ ವಯಸ್ಸಿನ ಇತರ ಮಕ್ಕಳೆಲ್ಲಾ ಆಟ ಪಾಠದಲ್ಲಿ ತಲ್ಲೀನರಾಗಿದ್ದರೆ ಈಕೆ ಯೌಟ್ಯೂಬ್ ನಲ್ಲಿ ಅಡುಗೆ ವಿಡಿಯೋ ಗಳಿಂದ ಪ್ರೇರಿತಳಾಗಿ ಈ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಳು. ತನ್ನ ಸಹಪಾತಠಿಗಳೆಲ್ಲಾ ಇಂಜಿನಿಯರ್, ಡಾಕ್ಟರ್ ಆಗಬೇಕೆಂಬ ಕನಸು ಕಂಡಿದ್ದರೆ, ಈಕೆ ಮಾತ್ರ ತಾನು ಮುಂದೆ ತನ್ನದೇ ರೆಸ್ಟೋರೆಂಟ್ ತೆರೆಯಬೇಕೆಂಬ ವಿನೂತನ ಕನಸು ಕಂಡಿದ್ದಾಳೆ.
ಅನೇಕ ಪದಾರ್ಥಗಳ ಸರಿಯಾದ ಮಿಶ್ರಣದಿಂದ ರುಚಿಯಾದ ತಿನಿಸುಗಳ ತಯಾರಿಯೇ ಆಶ್ಚರ್ಯ ಹುಟ್ಟಿಸುತ್ತದೆ ಎನ್ನುತ್ತಾಳೆ ಮೇಧಾ. 8ನೇ ವಯಸ್ಸಿಗೆ ಅಡುಗೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಪ್ರಸ್ತುತ ಗ್ರಾಹಕರ ಮನದಿಚ್ಚೆಯಂತೆ, ವಿವಿಧ ವಿನ್ಯಾಸದ ಕೇಕ್ ತಯಾರಿಸುತ್ತಾಳೆ. ದಿನವಿಡೀ ಲವಲವಿಕೆಯಿಂದಿರುವ ಮೇಧಾ, ಕೇಕ್ ತಯಾರಿಯ ಸಂದರ್ಭದಲ್ಲಿ ತಾಳ್ಮೆಯಿಂದಿರುವುದು ಅಚ್ಚರಿ ಎನ್ನುತ್ತಾರೆ ಮಾಯಾ ಮುರಳಿ.
ಫೋರಮ್ ಫಿಝ ಮಾಲ್ ಆಯೋಜಿಸಿದ ಕೇಕ್ ಫೆಸ್ಟ್ ನಲ್ಲಿ ಅತೀ ಕಿರಿಯ ಬೇಕರ್ ಎನಿಸಿಕೊಂಡ ಈಕೆಯನ್ನು ಇಂಡಿಯನ್ ಎಕ್ಸ್ಪ್ರೆಸ್, ಮಂಗಳೂರು ಆಕಾಶವಾಣಿ ಗುರುತಿಸಿವೆ. ಚಾಕಲೇಟ್ ತನ್ನ ಅಚ್ಚುಮೆಚ್ಚಿನ ಆಹಾರ ಪದಾರ್ಥ ಎನ್ನುವ ಈಕೆಗೆ ಹೆಸರಾಂತ ಚೆಫ್ ಗಳಾದ ಕುನಲ್ ಕಪೂರ್ ಮತ್ತು ಸಂಜೀವ್ ಕಪೂರ್ ರೋಲ್ ಮಾಡೆಲ್ ಗಳು. ಅಡುಗೆಯ ಜೊತೆಗೆ ಯಕ್ಷಗಾನ ಮತ್ತು ಭರತನಾಟ್ಯ ದಲ್ಲೂ ತನ್ನ ಛಾಪು ಮೂಡಿಸುತ್ತಿದ್ದಾಳೆ ಈ ಬಾಲ ಪ್ರತಿಭೆ. ಹೋಂ ಬೇಕರ್ ಆಗಿ 50 ಕ್ಕೂ ಹೆಚ್ಚಿನ ಆರ್ಡರ್ ಪಡೆದಿರುವ ಈ ಪೋರಿಯ ಸಾಧನೆಯನ್ನು ಪ್ರೋತ್ಸಾಹಿಸುವ ಆಸೆಯಿದ್ದರೆ cookbit ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ಯೌಟ್ಯೂಬ್ ಚಾನೆಲ್ ಗೆ ಭೇಟಿ ಕೊಡಿ.
ನಿಮ್ಮ ಮನೆ ಸಂಭ್ರಮಕ್ಕೆ ಮೇಧಾ cookbit ಕೇಕ್ ಬೇಕಾದಲ್ಲಿ ಸಂಪರ್ಕಿಸಿ 9663325306