ಟಿ20 ವಿಶ್ವಕಪ್ನಿಂದ ಆಸ್ಟ್ರೇಲಿಯಾ ತಂಡ ಹೊರಬಿದ್ದ ಬೆನ್ನಲ್ಲೇ ಡೇವಿಡ್ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಸೂಪರ್-8 ಸುತ್ತಿನ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ದ ಆಸ್ಟ್ರೇಲಿಯಾ 24 ರನ್ಗಳಿಂದ ಸೋಲನುಭವಿಸಿತ್ತು. ಈ ಸೋಲಿನೊಂದಿಗೆ ವಾರ್ನರ್ ತಮ್ಮ ಟಿ20 ಕೆರಿಯರ್ ಅಂತ್ಯಗೊಳಿಸಿದ್ದಾರೆ.
ಈ ಬಾರಿಯ ಟಿ20 ವಿಶ್ವಕಪ್ಗೂ ಮುನ್ನ ಡೇವಿಡ್ ವಾರ್ನರ್ ನಿವೃತ್ತಿಯ ಸೂಚನೆ ನೀಡಿದ್ದರು. ಅಲ್ಲದೆ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಚುಟುಕು ಕ್ರಿಕೆಟ್ ಕೆರಿಯರ್ ಅಂತ್ಯಗೊಳಿಸಲು ನಿರ್ಧರಿಸಿದ್ದರು. ಆದರೆ ಟಿ20 ವಿಶ್ವಕಪ್ನ ದ್ವಿತೀಯ ಸುತ್ತಿನಲ್ಲಿ ಆಸ್ಟ್ರೇಲಿಯಾ ತಂಡದ ಲೆಕ್ಕಾಚಾರಗಳು ತಲೆಕೆಳಗಾಗಿದೆ. ಹೀಗಾಗಿ ಡೇವಿಡ್ ವಾರ್ನರ್ ನೋವಿನ ವಿದಾಯ ಹೇಳುವಂತಾಗಿದೆ.
ಜನವರಿ 1, 2024 ರಂದು ಡೇವಿಡ್ ವಾರ್ನರ್ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಅಲ್ಲದೆ ಜನವರಿ 6 ರಂದು ಕೊನೆಯ ಪಂದ್ಯವಾಡುವ ಮೂಲಕ ಟೆಸ್ಟ್ ಕ್ರಿಕೆಟ್ಗೂ ಗುಡ್ ಬೈ ಹೇಳಿದ್ದರು. ಇದೀಗ ಟಿ20 ವಿಶ್ವಕಪ್ ಮೂಲಕ ಚುಟುಕು ಕ್ರಿಕೆಟ್ಗೂ ನಿವೃತ್ತಿ ಘೋಷಿಸಿದ್ದಾರೆ.
ಆಸ್ಟ್ರೇಲಿಯಾ ಪರ 110 ಟಿ20 ಪಂದ್ಯಗಳನ್ನಾಡಿರುವ ಡೇವಿಡ್ ವಾರ್ನರ್ 2300 ಎಸೆತಗಳನ್ನು ಎದುರಿಸಿ 3277 ರನ್ ಕಲೆಹಾಕಿದ್ದಾರೆ. ಈ ವೇಳೆ ಒಂದು ಭರ್ಜರಿ ಶತಕ ಹಾಗೂ 28 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಆಸೀಸ್ ಪರ 161 ಪಂದ್ಯಗಳಲ್ಲಿ 159 ಇನಿಂಗ್ಸ್ ಆಡಿರುವ ಡೇವಿಡ್ ವಾರ್ನರ್ 6932 ರನ್ ಕಲೆಹಾಕಿದ್ದಾರೆ. ಈ ವೇಳೆ 22 ಭರ್ಜರಿ ಶತಕ ಹಾಗೂ 33 ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಪರ 112 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 205 ಇನಿಂಗ್ಸ್ ಆಡಿರುವ ಅವರು 3 ದ್ವಿಶತಕ, 26 ಶತಕ ಹಾಗೂ 37 ಅರ್ಧಶತಕಗಳೊಂದಿಗೆ ಒಟ್ಟು 8786 ರನ್ ಕಲೆಹಾಕಿದ್ದಾರೆ. ಈ ಮೂಲಕ ಮೂರು ಸ್ವರೂಪಗಳಲ್ಲೂ ಆಸ್ಟ್ರೇಲಿಯಾ ಪರ 3 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಏಕೈಕ ಬ್ಯಾಟರ್ ಆಗಿ ಡೇವಿಡ್ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.