ಬೆಂಗಳೂರು: ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ದೇಶದ ಅನೇಕ ರಾಜ್ಯಗಳಲ್ಲಿ 12ನೇ ತರಗತಿಯ ಪರೀಕ್ಷೆಯನ್ನ ರದ್ದುಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲೂ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನ ಈ ವರ್ಷ ನಡೆಸುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ವಿಭಿನ್ನ ಸ್ಥಿತಿ ಇತ್ತು. ಆದರೆ ಈ ವರ್ಷ ಬೇರೆಯದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕಾಗಿ ಈ ಹಿಂದಿನ ಶಿಕ್ಷಣ ಸಚಿವರು, ಪರಿಷತ್ ಸದಸ್ಯರು, ಅಧಿಕಾರಿಗಳು ಪೋಷಕರು, ಮಕ್ಕಳ ಅಭಿಪ್ರಾಯ ಪಡೆದುಕೊಂಡು ನಿರ್ಧಾರ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.
ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ ನಡೆಸಲು ಎಲ್ಲಾ ಸಿದ್ಧತೆ ನಡೆಸಲಾಗಿತ್ತು. ಕೋವಿಡ್ ಎರಡನೇ ಅಲೆಯ ಹಿನ್ನಲೆಯಲ್ಲಿ ನಾವು ಚರ್ಚೆ ನಡೆಸಿ ಒಂದು ನಿರ್ಧಾರ ತೆಗೆದುಕೊಂಡಿದ್ದೇವೆ. ಸರ್ಕಾರದ ನಿರ್ಧಾರ ಎಲ್ಲರಿಗೂ ಸರಿ ಎನಿಸುವುದಿಲ್ಲ. ಏಕೆಂದರೆ ಮಾಡಲೇಬೇಕು ಎಂದು ಒಂದು ವರ್ಗ, ಮತ್ತೊಂದು ವರ್ಗ ಬೇಡವೇ ಬೇಡ ಎಂದು ಹೇಳುತ್ತಿದೆ. ಆದ್ದರಿಂದ ಪರೀಕ್ಷೆ ಇಲ್ಲದೇ ವಿದ್ಯಾರ್ಥಿಗಳಿಗೆ ಗ್ರೇಡ್ ನೀಡುವ ಬಗ್ಗೆ ಚಿಂತನೆ ಕೈಗೊಂಡಿದ್ದೇವೆ.
ಪಿಯುಸಿ ಮಕ್ಕಳು ಕಳೆದ ವರ್ಷ ಜಿಲ್ಲಾ ಮಟ್ಟದಲ್ಲಿ ಮೊದಲ ಪಿಯುಸಿ ಪರೀಕ್ಷೆ ಎದುರಿಸಿದ್ದರು. ಜಿಲ್ಲಾ ಮಟ್ಟದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆ ಪರೀಕ್ಷೆಯ ಅಂಕಗಳ ಆಧಾರ ಮೇಲೆ, ಒಂದಷ್ಟು ಮಾನದಂಡಗಳ ಆಧಾರದ ಮೇಲೆ ಮಕ್ಕಳಿಗೆ ಎ ಪ್ಲಸ್, ಎ, ಬಿ, ಸಿ ಗ್ರೇಡ್ಗಳನ್ನು ನೀಡುತ್ತೇವೆ. ಈ ಬಗ್ಗೆ ನಮ್ಮ ಪಿಯುಸಿ ಪರೀಕ್ಷಾ ಮಂಡಳಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.
ಆದರೆ ಗ್ರೇಡ್ ನೀಡುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಅಸಮಾಧಾನವಿದ್ದರೆ ಅವರಿಗೆ ಕೊರೊನಾ ಮುಗಿದ ಬಳಿಕ ಪರೀಕ್ಷೆ ನಡೆಸಲು ಚಿಂತನೆ ನಡೆಸುತ್ತೇವೆ. ನಾವು ಪಿಯುಸಿ ಪರೀಕ್ಷೆಯನ್ನು ಮುಂದೂಡುತ್ತಿಲ್ಲ. ಆದ್ದರಿಂದ ಈ ಬಾರಿ ಎಲ್ಲಾ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಗ್ರೇಡ್ನೊಂದಿಗೆ ಉತ್ತೀರ್ಣ ಮಾಡುತ್ತೇವೆ ಎಂದರು. ಇದೇ ವೇಳೆ ಸಿಇಟಿ, ನೀಟ್, ಜೆಇಇ ಪರೀಕ್ಷೆ ಸಿದ್ಧತೆ ನಡೆಸುವವರು ತಮ್ಮ ಅಧ್ಯಯನ ಮುಂದುವರಿಸಿ. ಯಾವುದೇ ಕಾರಣಕ್ಕೂ ನಿರಾಸೆ ಅನುಭವಿಸಬೇಡಿ. ಐಐಟಿಗೆ ಹೋಗುವ ಅವಕಾಶ ನಿಮಗೆ ಸಿಗಲಿ ಎಂದು ಬಯಸುತ್ತೇನೆ. ಪರೀಕ್ಷೆ ನಡೆಸಲೇಬೇಕಾದರೆ ಕನಿಷ್ಠ 12 ದಿನ ಬೇಕಾಗುತ್ತದೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದರು.