ಕಾಣಿಯೂರು: ಕ್ಯಾಮಣ ಗ್ರಾಮದ ಮಾರ್ಕಾಜೆ ನಿವಾಸಿ ವಿಶ್ವನಾಥ ಪೂಜಾರಿ(62) ಕೊರೊನಾ ಸೋಂಕಿನಿಂದ ಜೂ.4 ರಂದು ನಿಧನರಾದರು.
ಅನಾರೋಗ್ಯ ಕಾಣಿಸಿಕೊಂಡ ಸಲುವಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಳಿಕ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಾಗ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಬಳಿಕ ಕೊರೊನಾ ದಿಂದಾಗಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ ಅವರು ಸುಮಾರು ಒಂದು ತಿಂಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕಳೆದ ಮೂರು ದಿನಗಳ ಹಿಂದೆ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಇಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕೋವಿಡ್ ನಿಯಮಾವಳಿ ಪ್ರಕಾರ ಮಾರ್ಕಾಜೆಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಮೃತರು ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ, ಅಭಿವೃದ್ಧಿ ಸಮಿತಿಯ ಸದಸ್ಯರಾಗಿ, ಬೆಳಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಕಾಂಗ್ರೆಸ್‍ನ ಹಿಂದುಳಿದ ವರ್ಗಗಳ ಕಡಬ ತಾಲೂಕು ಅಧ್ಯಕ್ಷರಾಗಿ, ಬಿಲ್ಲವ ಸಂಘದ ಸವಣೂರು ವಲಯಾಧ್ಯಕ್ಷರಾಗಿ, ಗೆಜ್ಜೆಗಿರಿ ಅಭಿವೃದ್ಧಿಸಮಿತಿಯ ನಿರ್ದೆಶಕರಾಗಿ, ಕೆಲೆಂಬಿರಿ ಬ್ರಹ್ಮಬೈದರ್ಕಳ ಗರಡಿಯ ಕೋಶಾಧಿಕಾರಿಯಾಗಿ, ನರಿಮೊಗಿರು ಮೂರ್ತೆದಾರರ ಸೇವಾ ಸಂಘದ ನಿರ್ದೆಶಕರಾಗಿ, ಪುತ್ತೂರು ಬ್ರಹ್ಮಶ್ರೀ ವಿವಿದೋದ್ಧೇಶ ಸಹಕಾರಿ ಸಂಘದ ನಿರ್ದೆಶಕರಾಗಿ , ಬೆಳಂದೂರು ಗ್ರಾ.ಪಂ ಸದಸ್ಯರಾಗಿ, ಹೀಗೆ ಹತ್ತುಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಹತ್ತು ವರ್ಷಗಳ ಕಾಲ ಕಾಣಿಯೂರಿನಲ್ಲಿ ಜೋಡುಕರೆ ಕಂಬಳ ನಡೆಸಿದ್ದರು. ತುಳು ನಾಟಕ ಕಲಾವಿಧರಾಗಿ ಕೂಡಾ ಕಲಾ ಸೇವೆ ಮಾಡಿದ್ದರು.