ಬೆಟ್ಟಂಪಾಡಿ : ನಾವೇ ಕೆಡಿಸಿದ ಪರಿಸರ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಿ ಸುಧಾರಿಸುವುದು ನಮ್ಮ ಜವಾಬ್ಧಾರಿ ಎಂದು ರಥಬೀದಿ, ಮಂಗಳೂರು ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಜಯಕರ ಭಂಡಾರಿ ಹೇಳಿದರು. ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರಾಜ್ಯ ಎನ್ನೆಸ್ಸೆಸ್ ಕೋಶಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಡೆದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ “ನವ ಪರಿಸರಕ್ಕಾಗಿ ಯುವಜನತೆ” ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಯುವಜನರು ಪರಿಸರ ಸಂರಕ್ಷಣೆಯ ಮಹತ್ವ ಅರಿತುಕೊಂಡು ಪರಿಸರ ಪುನರ್ ನಿರ್ಮಾಣ ಸಂಬಂಧೀ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾರತ ಸರ್ಕಾರದ ಎನ್.ಎಸ್.ಎಸ್ ಪ್ರಾದೇಶಿಕ ನಿರ್ದೇಶಕರಾಗಿರುವ ಕೆ ವಿ ಖಾದ್ರಿ ನರಸಿಂಹಯ್ಯ ಇವರು ಮಾತನಾಡಿ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಿ ನಮ್ಮಲ್ಲಿರುವ ಸಂಪನ್ಮೂಲಗಳನ್ನು ಮಿತವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ರಾಜ್ಯ ಎನ್.ಎಸ್.ಎಸ್ ಅಧಿಕಾರಿಗಳಾದ ಪ್ರತಾಪ್ ಲಿಂಗಯ್ಯ ಇವರು ಸ್ವಾರ್ಥ ಮನೋಭಾವ ಬಿಟ್ಟು ಪರಿಸರದೊಂದಿಗೆ ಸ್ನೇಹಜೀವಿಯಾಗಿ ಬಾಳಬೇಕು ಎಂದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಕಿಶೋರ್ ಕುಮಾರ್ ಸಿ ಕೆ ಇವರು ಮಾತನಾಡಿ ಈಗಾಗಲೇ ನಶಿಸುತ್ತಿರುವ ಪರಿಸರ ವ್ಯವಸ್ಥೆಯನ್ನು ಪುನರ್ ರಚನೆ ಮಾಡುವಲ್ಲಿ ಎಲ್ಲರೂ ಕೈ ಜೋಡಿಸುವ ಮೂಲಕ ಪರಿಸರ ವ್ಯವಸ್ಥೆಯನ್ನು ರಕ್ಷಿಸಬೇಕಾಗಿದೆ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನಾ ಸಂಯೋಜನಾಧಿಕಾರಿಗಳಾದ ಡಾ. ನಾಗರತ್ನ ಕೆ ಎ ಇವರು ಮಾತನಾಡಿ ಪ್ರಕೃತಿ ನಮ್ಮ ಭಾಗವಲ್ಲ, ನಾವು ಪ್ರಕೃತಿಯ ಭಾಗ ಎಂಬುದನ್ನು ಮನಗಂಡುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಇವರು ಮಾತನಾಡಿ ಅಳಿವಿನ ಅಂಚಿನಲ್ಲಿರುವ ಪರಿಸರ ಎಂದರೆ ಅದು ನಮ್ಮ ಬದುಕಿನ ದುರಂತದ ಸೂಚನೆಗಳು, ಪ್ರಕೃತಿ ಜೊತೆಗೆ ಭಾವನಾತ್ಮಕ ಸಂಬಂಧದ ಅಗತ್ಯವಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಕಾಲೇಜಿನಲ್ಲಿ ಕಳೆದ ವರ್ಷ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆರಂಭವಾದಂತಹ “ವನಪರ್ವ” ಕಾರ್ಯಕ್ರಮದ ಮುಂದುವರಿದ ಭಾಗವಾಗಿ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಲ್ಲೇ ಗಿಡ ನೆಡುವ ಮುಖಾಂತರ ವನಪರ್ವ ಕಾರ್ಯಕ್ರಮವನ್ನು ಮುಂದುವರೆಸಿದರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾಲೇಜು ಮಟ್ಟದಲ್ಲಿ ಭಾಷಣ ಸ್ಪರ್ದೆ, ಚಿತ್ರಕಲೆ ಮತ್ತು ಕವನ ರಚನಾ ಸ್ಪರ್ಧೆಗಳನ್ನು ಆನ್ಲೈನ್ ಮುಖಾಂತರ ನಡೆಸಲಾಯಿತು.
ಝೂಮ್ ಮುಖಾಂತರ ನಡೆದ ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯ ನೋಡೆಲ್ ಅಧಿಕಾರಿಗಳು ಹಾಗೂ ರಾಜ್ಯದ ವಿವಿಧ ಕಾಲೇಜುಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ದಾಮೋದರ ಗೌಡ ಕಣಜಾಲು ಇವರು ಸ್ವಾಗತಿಸಿದರು. ಎನ್.ಎಸ್.ಎಸ್ ಘಟಕ ನಾಯಕಿ ರಂಜಿತಾ ಜಿ ವಂದಿಸಿದರು. ಐಕ್ಯೂಎಸಿ ಸಂಚಾಲಕರು ಮತ್ತು ಎನ್.ಎಸ್.ಎಸ್ ಅಧಿಕಾರಿಗಳಾಗಿರುವ ಹರಿಪ್ರಸಾದ್ ಎಸ್ ಕಾರ್ಯಕ್ರಮ ನಿರ್ವಹಿಸಿದರು.