ಕೋಲಾರ : ನಿನ್ನೆ ಖುಷಿಯಿಂದ ಮದುವೆಯಾಗಿದ್ದ ನವಜೋಡಿ ಕೆಲವೇ ಗಂಟೆಗಳಲ್ಲಿ ಬಡಿದಾಡಿಕೊಂಡು ಪ್ರಾಣಬಿಟ್ಟಿರುವ ಘಟನೆ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ನಡೆದಿದೆ.
ಲಿಖಿತಶ್ರೀ (20) ಹಾಗೂ ನವೀನ್ (29) ಮೃತರು.
ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಿನ್ನೆ ಚಿಕಿತ್ಸೆ ಫಲಿಸದೇ ಲಿಖಿತಶ್ರೀ ಸಾವನ್ನಪ್ಪಿದ್ದರೆ ಇಂದು ನವೀನ್ ಸಾವನ್ನಪ್ಪಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ನವೀನ್ ಸಂಬಂಧಿ ವಿಶಾಲಾಕ್ಷಿ ಹಾಗೂ ಪವಿತ್ರಾ ಘಟನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಿನ್ನೆ ಬೆಳಗ್ಗೆ 6 ಗಂಟೆಗೆ ಮದುವೆ ಆಗಿದೆ. ನಾನು ಆ ಹುಡುಗಿ ಇಲ್ಲ ಅಂದ್ರೆ ಬದುಕಲ್ಲ ಅಂತ ಹೇಳಿದ್ದ. ಅದಕ್ಕೆ ನಾವು ಅವಳ ಜೊತೆ ಮದುವೆ ಮಾಡಿದ್ದೇವೆ. ಕಾಲುಂಗುರ ಹಾಗೂ ತಾಳಿ ಬೊಟ್ಟು ನಾವೇ ಕೊಟ್ಟಿದ್ದೇವೆ. ಇಬ್ಬರು ಸಂಜೆ 5 ಗಂಟೆಗೆ ಟೀ ಕುಡಿದು ಪಕ್ಕದ ಮನೆಗೆ ಹೋಗಿದ್ದಾರೆ.
ಆ ಮನೆಯ ರೂಮಿನ ಬಾಗಿಲು ಹಾಕಿಕೊಂಡಿದ್ದಾರೆ. ದಿಢೀರನೇ ಹುಡುಗಿ ಕೂಗಿದ ಶಬ್ದ ಕೇಳಿಸಿತು. ಸಾವಿಗೆ ಏನು ಕಾರಣ ಅಂತ ಗೊತ್ತಾಗಲಿಲ್ಲ. ಬಾಗಿಲು ನೂಕಿ ಒಳಗೆ ಹೋದಾಗ ಇಬ್ಬರಿಗೂ ಗಾಯವಾಗಿ ಕೆಳಗೆ ಬಿದ್ದಿದ್ರು. ನಮಗೂ ಕಾರಣ ಗೊತ್ತಾಗ್ತಿಲ್ಲ, ಇಬ್ಬರು ಒಬ್ಬರಿಗೊಬ್ಬರು ಇಷ್ಟ ಪಟ್ಟು ಮದುವೆ ಆಗಿದ್ದಾರೆ. ಅವರ ಅಪ್ಪ ಅಮ್ಮ ಸಹ ಘಟನೆ ವೇಳೆ ಇಲ್ಲೇ ಇದ್ರು. ಹುಡುಗನಿಗೆ 28 ವರ್ಷ ಆಗಿತ್ತು. ಹುಡುಗಿಗೆ 20 ವರ್ಷ ಆಗಿತ್ತು. ನವೀನ್ ರಾಜ್ ಪೇಟೆ ರಸ್ತೆಯಲ್ಲಿ ಬಟ್ಟೆ ಅಂಗಡಿ ಹಾಕಿಕೊಂಡು ಕೆಲಸ ಮಾಡ್ತುತ್ತಿದ್ದ. ಹುಡುಗಿ ದ್ವಿತೀಯ ಪಿಯುಸಿ ಓದುತ್ತಿದ್ದಳು ಎಂದು ತಿಳಿಸಿದ್ದಾರೆ.