ಪುತ್ತೂರು : ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಸ್ಥಾಪಕಧ್ಯಕ್ಷರಾದ ಜಯರಾಮ ಕೆದಿಲಾಯ ರವರ ತಾಯಿ ಪಂಜಳ ಶಿಬರಾ ನಿವಾಸಿ ಪದ್ಮಾವತಿ ಯವರು (92) ಇಂದು ನಿಧನರಾದರು.
ವಯೋಸಹಜ ಅನಾರೋಗ್ಯದಿಂದಾಗಿ ಪದ್ಮಾವತಿಯವರು ಇಂದು ಮೃತರಾದರು. ಮೃತರು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಪ್ರಾಂತ್ಯಗಳನ್ನು ಮೂಲ ನೆಲೆಯನ್ನಾಗಿರಿಸಿ, ನಾಡಿನೆಲ್ಲೆಡೆ ಹಂಚಿಹೋಗಿರುವ, ತುಳುಭಾಷೆಯನ್ನಾಡುವ ಬ್ರಾಹ್ಮಣ ವರ್ಗದಲ್ಲಿ ಒಂದು ವರ್ಗವಾಗಿರುವ ಶಿವಳ್ಳಿ ಸಮುದಾಯದಲ್ಲಿ, ಕೆದಿಲಾಯ ಮನೆತನ ವೆಂಬುದು ಅತ್ಯಂತ ದೊಡ್ಡ ಮನೆತನಗಳಲ್ಲೊಂದು..,
ಕೃಷಿ, ಅಧ್ಯಾಪನ ಹಾಗೂ ವೈದಿಕ ವೃತ್ತಿಯನ್ನೇ ಪ್ರಮುಖವಾಗಿ ಅವಲಂಬಿಸಿರುವ ಬ್ರಾಹ್ಮಣ ಸಮಾಜದಲ್ಲಿ ಸೈನ್ಯಕ್ಕೆ ಸೇರಿ ದೇಶಸೇವೆ ಮಾಡುವವರು ತೀರಾ ವಿರಳ ಎನ್ನಬಹುದು. ಆದರೆ ಇದಕ್ಕೊಂದು ಅಪವಾದ ಎಂಬಂತೆ ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿ
“ಮಿಲಿಟ್ರಿ ಕೆದಿಲಾಯರು’ ಎಂದೇ ಖ್ಯಾತರಾದವರು ವೇ| ಮೂ| ಕೃಷ್ಣ ಕೆದಿಲಾಯರು.
1946-47ರ ಕಾಲಘಟ್ಟದಲ್ಲಿ ಕೃಷ್ಣ ಕೆದಿಲಾಯರು ಸೇನಾ ಕೆಲಸಕ್ಕೆ ರಾಜೀನಾಮೆಯಿತ್ತು ಪರಂಪರಾಗತವಾಗಿ ಬಂದಿದ್ದ ವೈದಿಕ ವೃತ್ತಿಯನ್ನು ಆಯ್ದುಕೊಂಡವರು. ಇವರ
ಮಡದಿಯೇ ಶ್ರೀಮತಿ ಪದ್ಮಾವತಿ ಕೆದಿಲಾಯರು. ಕೆದಿಲಾಯ ಕುಟುಂಬದವರು ಹತ್ತು ತಲೆಮಾರುಗಳಿಂದಲೂ ವೈದಿಕ ವೃತ್ತಿಯನ್ನೇ ನಡೆಸಿಕೊಂಡು ಬರುತ್ತಿದ್ದವರು.
ವಿಟ್ಲ ಅರಸರ ಕಾಲದಲ್ಲಿ ರಾಜ ಪುರೋಹಿತ ಕುಟುಂಬವಾಗಿದ್ದ ಕೆದಿಲಾಯರ ಮನೆತನ ಅಂದಿನಿಂದ ಇಂದಿನ ತನಕ ಈ ವೃತ್ತಿಯನ್ನು ನಿಷ್ಠೆಯಿಂದ ಮಾಡುತ್ತಾ ಸಮಾಜದ ಗೌರವ ಸಂಪಾದಿಸಿಕೊಂಡವರು. ಶ್ರೀಮತಿ ಪದ್ಮಾವತಿ ಕೆದಿಲಾಯ ಮತ್ತು ವೇ| ಮೂ| ಕೃಷ್ಣ ಕೆದಿಲಾಯರ ಮೊದಲ ಮಗ ಜಯರಾಮ ಕೆದಿಲಾಯರು.