ನವದೆಹಲಿ: ಚುನಾವಣೆ ಹೊಸ್ತಿಲಲ್ಲಿರುವಾಗಲೇ ಉತ್ತರದ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಆಡಳಿತ ವೈಖರಿ ಬಗ್ಗೆ ಭಿನ್ನಾಭಿಪ್ರಾಯಗಳು ಶುರುವಾಗಿವೆ. ಇದರ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ದೆಹಲಿಗೆ ಪ್ರಯಾಣ ಬೆಳೆಸಿರೋದು ತೀವ್ರ ಕುತೂಹಲ ಮೂಡಿಸಿದೆ.
ಇನ್ನು ತಮ್ಮ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಹೈಕಮಾಂಡ್ ನಾಯಕರನ್ನ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಆದಿತ್ಯನಾಥ್ ಈಗಾಗಲೇ ಗೃಹ ಸಚಿವ ಅಮಿತ್ ಶಾರನ್ನ ಭೇಟಿಯಾಗಿದ್ದಾರೆ ಅನ್ನೋ ಮಾಹಿತಿ ಲಭಿಸಿದೆ.
ಉತ್ತರ ಪ್ರದೇಶದ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳು ಶುರುವಾದ ಬಳಿಕ ಇದೇ ಮೊದಲ ಬಾರಿಗೆ ಯೋಗಿ ಆದಿತ್ಯನಾಥ್ ಕೇಂದ್ರದ ನಾಯಕರನ್ನ ಭೇಟಿ ಮಾಡುತ್ತಿದ್ದಾರೆ. ಸದ್ಯ ಯುಪಿ ಸರ್ಕಾರ ಕೊರೊನಾ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದು ಮುಂದಿನ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಅನ್ನೋದ್ರ ಬಗ್ಗೆ ಹಾಗೂ ರಾಜ್ಯ ಬಿಜೆಪಿಯಲ್ಲಿ ಆಗುತ್ತಿರುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಇನ್ನು ಯೋಗಿ ಆದಿತ್ಯನಾಥ್ ನಾಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಜೆಪಿ ನಡ್ಡಾ ಅವರನ್ನ ಭೇಟಿಯಾಗಲಿದ್ದಾರೆ.
ಮತ್ತೊಂದು ಬೆಳವಣಿಗೆ ಏನೆಂದರೆ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಜಿತಿನ್ ಪ್ರಸಾದ್ ಅವರನ್ನ ಬಿಜೆಪಿ ಸೆಳೆದಿದೆ. ಅವರನ್ನ ಉನ್ನತ ಹುದ್ದೆಯಲ್ಲಿ ಕೂರಿಸುವ ಪ್ಲಾನ್ನಲ್ಲಿ ಬಿಜೆಪಿ ಇದೆ. ಯಾಕಂದ್ರೆ ಪ್ರಸಾದ್ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇದೆ. ಬ್ರಾಹ್ಮಣ ಸಮುದಾಯದ ಮತ ಸೆಳೆಯುವಲ್ಲಿ ಇವರು ಪ್ರಮುಖ ಪಾತ್ರವಹಿಸಲಿದ್ದಾರೆ ಎನ್ನಲಾಗುತ್ತಿದೆ.
ಚುನಾವಣೆ ಹತ್ತಿರವಾಗುತ್ತಿದೆ, ಇದರ ಮಧ್ಯೆ ಹಲವು ಸಂಸದರು ಮತ್ತು ಶಾಸಕರು ಯೋಗಿ ಆದಿತ್ಯನಾಥ್ ಸರ್ಕಾರ ಕೊರೊನಾವನ್ನ ನಿಭಾಯಿಸಿದ ರೀತಿ ನೀತಿಗಳ ಬಗ್ಗೆ ಬಹಿರಂಗವಾಗಿ ಹೇಳಿಕೆಗಳನ್ನ ನೀಡ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ.. ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ಕೇಂದ್ರದ ನಾಯಕರೊಂದಿಗೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ಸಚಿವರು, ಶಾಸಕರು, ಸಂಸದರು ಮತ್ತು ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ, ಅಲ್ಲಿನ ವಾಸ್ತವಸ್ಥಿತಿಯನ್ನ ಅರಿತುಕೊಳ್ಳುವ ಪ್ರಯತ್ನ ಮಾಡಿದ್ದರು.
ಆದರೆ ಬಿಜೆಪಿ ಯೋಗಿ ಆದಿತ್ಯನಾಥ್ ಅವರನ್ನ ಕೆಳಗಿಳಿಸುವ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರ ನೇತೃತ್ವದಲ್ಲಿ ಮುಂಬರುವ ಚುನಾವಣೆಯನ್ನ ಎದುರಿಸಲು ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜೊತೆಗೆ ತಮ್ಮ ಆಡಳಿತದ ಬಗ್ಗೆ ಅಪಸ್ವರ ಕೇಳಿಬಂದ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್, ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಈ ವೇಳೆ ಜಾತಿ ಹಾಗೂ ಸ್ಥಳೀಯ ಆಧಾರದ ಮೇಲೆ ಹೊಸ ಮುಖಗಳಿಗೆ ಜವಾಬ್ದಾರಿ ನೀಡಲಿದ್ದಾರೆ ಎನ್ನಲಾಗ್ತಿದೆ.