ಪುತ್ತೂರು: ಸರಕಾರಿ ಆಸ್ಪತ್ರೆಯಲ್ಲಿ ತೆರೆದಿರುವ ಕೋವಿಡ್ -19ರ ಸ್ವ್ಯಾಬ್ ಪರೀಕ್ಷಾ ಕೇಂದ್ರದಲ್ಲಿ ಡಾಟಾ ಎಂಟ್ರಿ ನಡೆಸಲು ಒಂದೊಂದು ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಲು ಇಲಾಖೆಗಳಿಗೆ ಸೂಚನೆ ನೀಡಿದ್ದರೂ ಅದನ್ನು ಪರಿಣಾಮಕಾರಿಯಾಗಿ ಯಾರೂ ಮಾಡಿಲ್ಲ. ಕೋವಿಡ್ ನಿರ್ವಹಣಾ ಕರ್ತವ್ಯದಲ್ಲಿ ಇಲಾಖಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಗಂಭೀರ ಆರೋಪವನ್ನು ಮಾಡಿದರು.ಇಲಾಖಾಧಿಕಾರಿಗಳನ್ನು ತರಾಟೆಗೆತ್ತಿಕೊಂಡು ಕೊನೆಗೆ ಸಭೆಯಿಂದಲೇ ಹೊರಗೆ ಹೋದ ಘಟನೆ ಜೂ.10ರಂದು ನಡೆಯಿತು.
ಜೂ.10ರಂದು ತಾ.ಪಂ ಕಿರು ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಕೋವಿಡ್ ನಿರ್ವಹಣೆ ಕುರಿತು ಮಾತನಾಡಿದ ಅವರು ಕೋವಿಡ್ ಆರಂಭಗೊಂಡಾಗಿನಿಂದ ಸಚಿವಾಲಯ ಸೇರಿದಂತೆ ರಾಜ್ಯ ಮಟ್ಟದ ಕಚೇರಿಗಳಲ್ಲಿ ಮತ್ತು ಜಿಲ್ಲೆಗಳ ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳ ಅಧಿಕಾರಿ/ ನೌಕರರು ಕೇಂದ್ರಸ್ಥಾನದಲ್ಲಿ ಲಭ್ಯವಿದ್ದು, ಕೋವಿಡ್ -19 ಕರ್ತವ್ಯಕ್ಕಾಗಿ ನಿಯೋಜಿಸಿದ್ದಲ್ಲಿ ತಪ್ಪದೆ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಸರಕಾರದ ಸುತ್ತೋಲೆ ಇದ್ದರೂ ತಾಲೂಕಿನ ಇಲಾಖಾಧಿಕಾರಿಗಳು ತಮ್ಮ ಸಿಬ್ಬಂದಿಗಳನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸದಿರುವುದು ಭಾರಿ ಬೇಸರ ತಂದಿದೆ. ಸರಕಾರಿ ಆಸ್ಪತ್ರೆಯಲ್ಲಿ ತೆರೆದಿರುವ ಕೋವಿಡ್ -19 ಪರೀಕ್ಷಾ ಕೇಂದ್ರದಲ್ಲಿ ಡಾಟಾ ಎಂಟ್ರಿ ನಡೆಸಲು ವಿವಿಧ ಇಲಾಖೆಗಳ ಸಿಬ್ಬಂದಿಗಳನ್ನು ನಿಯೋಜಿಸಲು ಸಹಾಯಕ ಆಯುಕ್ತರು ನೀಡಿದ ಸೂಚನೆಯಂತೆ ಇಲಾಖಾ ಸಿಬ್ಬಂದಿಗಳನ್ನು ಡಾಟಾ ಎಂಟ್ರಿ ನಡೆಸಲು ನಿಯೋಜಿಸಿ ಆದೇಶಿಸಲಾಗಿತ್ತು. ಕಾಯ್ದಿರಿಸಿದ ಸಿಬ್ಬಂದಿಗಳು ಯಾವುದೇ ಸಂದರ್ಭದಲ್ಲಿ ಲಭ್ಯವಿರುವಂತೆ ಇಲಾಖಾ ಮುಖ್ಯಸ್ಥರು ನಿಯೋಜಿತ ಸಿಬ್ಬಂದಿಗಳಿಗೆ ಸೂಚಿಸಿಬೇಕೆಂದು ತಿಳಿಸಲಾಗಿತ್ತು. ಆದರೆ ನಿಮ್ಮ ಇಲಾಖೆಯಿಂದ ಯಾರೂ ಒಬ್ಬ ಸಿಬ್ಬಂದಿಯೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಆಸ್ಪತ್ರೆಯಿಂದ ಯಾವಾಗಾಲೂ ನನಗೆ ಪೋನ್ ಮಾಡಿ ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ನಾನೇನು ಉತ್ತರ ಕೊಡಬೇಕು ಎಂದು ಇಲಾಖಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನನಗೂ ಬೇರೆ ಕೆಲಸ ಇದೆ:
ತಾಲೂಕಿನ 41 ಗ್ರಾ.ಪಂ ರಜೆಯ ದಿವಸವೂ ಕರ್ತವ್ಯದಲ್ಲಿದೆ. ನಿಮ್ಮ ಇಲಾಖೆಗೆ ಈ ಕೆಲಸ ಯಾಕೆ ಆಗುವುದಿಲ್ಲ ಎಂದ ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರು ನನಗೂ ಬೇರೆ ಕೆಲಸ ಇದೆ. ಆದರೂ ಹೆಚ್ಚುವರಿ ಕೆಲಸ ಮಾಡಲೇ ಬೇಕಾಗಿದೆ. ಆದರೆ ಅದನ್ನೇ ನಿಮಗೆ ಯಾಕೆ ಮಾಡಲು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ನೀವು ಯಾರಿಗೆ ಬೇಕಾದರೂ ದೂರು ಕೊಡಿ. ನಾನು ಇಲ್ಲಿಂದ ಯಾವುದೇ ಬಿಲ್ ಪಾಸ್ ಮಾಡುವುದಿಲ್ಲ. ಚುನಾವಣೆ ಡ್ಯೂಟಿ ಆದರೆ ಜಿಲ್ಲಾಧಿಕಾರಿಯವರ ಭಯದಿಂದ ಬೆಳಗ್ಗೆ ಎಲ್ಲರು ಬರುತ್ತೀರಿ. ಆದರೆ ಈ ಪರಿಸ್ಥಿತಿಯಲ್ಲಿ ನನ್ನ ಆದೇಶಕ್ಕೆ ನಾನೇ ನಿಮ್ಮಲ್ಲಿ ವಿನಂತಿ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಏನಿದ್ದರೂ ಮುಂದೆ ನಿಮ್ಮ ವರದಿಯನ್ನು ಸಿಇಒ, ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಎಂದರು.
ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್, ಸಿಡಿಪಿಒ ಶ್ರೀಲತಾ, ಸಹಾಯಕ ಕೃಷಿ ನಿದೇರ್ಶಕ ನಾರಾಯಣ ಶೆಟ್ಟಿ, ತೋಟಗಾರಿಕಾ ಇಲಾಖೆ ನಿರ್ದೇಶಕಿ ರೇಖಾ, ಪಶುಸಂಗೋಪನಾ ವೈದ್ಯಾಧಿಕಾರಿ ಡಾ.ಪ್ರಸನ್ನ ಹೆಬ್ಬಾರ್, ಸಾಮಾಜಿಕ ಅರಣ್ಯಾಧಿಕಾರಿ ವಿದ್ಯಾರಾಣಿ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮ ಇಲಾಖೆಗಿರುವುದು ಶುಕ್ರವಾರದ ಡ್ಯೂಟಿ:
ಸಿಡಿಪಿಒ ಶ್ರೀಲತಾ ಅವರು ಮಾತನಾಡಿ ಅಂಗನವಾಡಿ ಕಾರ್ಯಕರ್ತರು, ಸುಫರ್‌ವೈಸರ್ ಪ್ರಂಟ್‌ಲೈನ್‌ನಲ್ಲಿ ಕೆಲಸ ಮಾಡುತ್ತಾರೆ. ಆದರೆ ಈ ವಿಚಾರದಲ್ಲಿ ನನಗೆ ಬಂದ ಲೀಸ್ಟ್‌ನಲ್ಲಿ ನಮ್ಮ ಇಲಾಖೆಯಿಂದ ಸಿಬ್ಬಂದಿ ಶುಕ್ರವಾರಕ್ಕೆ ಕರ್ತವ್ಯ ಹಾಜರಾಗಲಿದೆ. ಇನ್ನೂ ಡ್ಯೂಟಿ ಸರದಿ ಬಂದಿಲ್ಲ. ಇನ್ನೊಂದು ವಿಚಾರದಲ್ಲಿ ನಮ್ಮ ಇಲಾಖೆಯಿಂದ ಒಬ್ಬರು ಬಾಣಂತಿ ರಜೆ, ಇನ್ನೊಬ್ಬರು ಡೆಂಗ್ಯೂ ಸೇರಿದಂತೆ ಮೂರು ಮಂದಿ ರಜೆಯಲ್ಲಿದ್ದಾರೆ. ಸದ್ಯ ಒಬ್ಬರೇ ಸಿಬ್ಬಂದಿ ಇರೋದು. ಇಂತಹ ಸಂದರ್ಭದಲ್ಲಿ ನನಗೂ ಮಾಹಿತಿ ನೀಡಿದೆ ಸಿಬ್ಬಂದಿಯನ್ನು ಡ್ಯೂಟಿಗೆ ಹಾಕುವುದು ಸರಿಯಲ್ಲ. ಇಲ್ಲಿ ಮಿಸ್ ಕಮ್ಯೂನಿಕೇಶನ್ ಆಗಿದೆ ಎಂದರು.
ಡ್ಯೂಟಿ ಮಾಡಬೇಕು, ಆದರೆ ಪ್ರೊಸಿಜರ್ ತಪ್ಪಿದೆ
ವಿಪತ್ತು ಕಾಯ್ದೆ ಜಾರಿಯಲ್ಲಿರುವಾಗ ಯಾರೂ ಮಾತನಾಡುವ ಹಾಗೆ ಇಲ್ಲ. ಎಲ್ಲರೂ ಕೆಲಸ ಮಾಡಲೇ ಬೇಕು. ಇದು ನಮ್ಮ ಡ್ಯೂಟಿ. ಆದರೆ ಈ ವಿಚಾರ ನಮ್ಮ ಗಮಕ್ಕೆ ಬಂದಿಲ್ಲ. ಪೋನ್ ಮಾಡಿ ನಿಮ್ಮ ಕಾರ್ಯಕ್ರಮದಲ್ಲಿ ಹಾಕಿಕೊಂಡಿರುವ ಕುರಿತು ಕೇಳಿಕೊಂಡಿಲ್ಲ. ನಮ್ಮಲ್ಲಿಂದ ಡ್ಯೂಟಿಗೆ ಹಾಕಿ ಮೂರಲ್ಲದಿದ್ದರೂ ಐವರು ಸಿಬ್ಬಂದಿಯನ್ನು ನಾವು ಕೊಡಲು ಸಿದ್ದ. ಸಿಬ್ಬಂದಿಯನ್ನು ಕಂಟ್ರೋಲ್‌ನಲ್ಲಿ ಇಡಲು ನಮಗೂ ಗೊತ್ತಿದೆ ಎಂದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ನಮ್ಮಲ್ಲಿಂದ 2೦೦ ಶಿಕ್ಷಕರನ್ನು ನಾವು ಕೊಟ್ಟಿದ್ದೇವೆ. ರೈಲ್ವೇ ನಿಲ್ದಾಣದಲ್ಲೂ ನಮ್ಮ ಶಿಕ್ಷಕರು ಕೋವಿಡ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ನಿರ್ವಹಣೆಗೆ ನಮಗೆ 5೦ ಜನ ಸಿಬ್ಬಂದಿ ಬೇಕು. ಇಲಾಖೆಯಿಂದ ಎಲ್ಲರು ತಲಾ ಮೂರರಂತೆ ಸಿಬ್ಬಂದಿ ಕೊಡಿ ಎಂದು ಹೇಳಿ. ಇಂತಹ ಸಂದರ್ಭದಲ್ಲಿ ಕೊಡುವ ಜವಾಬ್ದಾರಿ ನಮ್ಮದು ಎಂದರು.