ಉಡುಪಿ: ದುಬೈನಲ್ಲಿ ಉದ್ಯಮಿಯಾಗಿದ್ದ ಭಾಸ್ಕರ್ ಶೆಟ್ಟಿ ಅವರನ್ನು ಸ್ವಾರ್ಥಕ್ಕಾಗಿ ಅಮಾನವೀಯವಾಗಿ ಅವರ ಪತ್ನಿ ರಾಜೇಶ್ವರಿ ಗೆಳೆಯ ಅರ್ಚಕ ನಿರಂಜನ್ ಭಟ್ ಹೋಮಕುಂಡದಲ್ಲಿ ಸುಟ್ಟು ಹತ್ಯೆ ಮಾಡಿದ್ದರು. ತಂದೆಯೊಬ್ಬನನ್ನು ಮಗ ತನ್ನ ತಾಯಿಯೊಂದಿಗೆ ಸೇರಿ ಕೊಲೆ ಮಾಡಿದ ಈ ದುಷ್ಕೃತ್ಯಕ್ಕೆ ಸಂಬಂಧಿಸಿ ಘಟನೆ ನಡೆದ 5 ವರ್ಷಗಳ ಬಳಿಕ ಜೂ. 8ರಂದು ಶಿಕ್ಷೆಯೂ ಪ್ರಕಟವಾಗಿದೆ.
ಕೊಲೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳಾದ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಹಾಗೂ ಜ್ಯೋತಿಷಿ ನಿರಂಜನ್ ಭಟ್ ಮೂವರಿಗೂ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ತಾಯಿ ಮತ್ತು ಮಗ ಜೈಲು ಪಾಲಾದ ಬಳಿಕ ಉದ್ಯಮಿ ಭಾಸ್ಕರ್ ಅವರ ಆಸ್ತಿ ಕುರಿತಂತೆ ಚರ್ಚೆಗಳು ಭುಗಿಲೆದ್ದಿವೆ. ಹತ್ಯೆಗೆ ಎರಡು ವಾರಗಳ ಹಿಂದೆ ಅಂದರೆ ಜು. 15,2016ರಂದು ಭಾಸ್ಕರ ಶೆಟ್ಟಿ ತನ್ನ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವೀಲುನಾಮೆಯನ್ನು ಬರೆಸಿದ್ದರು. ಇದು ಕೊಲೆ ಪ್ರಕರಣದ ಅರೋಪ ಪಟ್ಟಿಯಲ್ಲಿ ಸಲ್ಲಿಸಿರುವ ಒಟ್ಟು 270 ದಾಖಲೆಗಳ ಪೈಕಿ 95ನೇ ದಾಖಲೆಯಾಗಿದ್ದು ಇದನ್ನು ಉಡುಪಿ ಜಿಲ್ಲಾ ಮತ್ತು ನ್ಯಾಯಾಲಯ ವಿಚಾರಣೆ ವೇಳೆ ಪರಿಗಣಿಸಿತ್ತು.
ಭಾಸ್ಕರ ಶೆಟ್ಟಿ ಸ್ಥಿರಾಸ್ತಿಗಳು: ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಶಿರಿಬೀಡುವಿನಲ್ಲಿರುವ ಸರ್ವೇ ನಂಬ್ರ 114ರಲ್ಲಿರುವ ಒಟ್ಟು 26 ಸೆಂಟ್ಸ್ ಸ್ಥಿರಾಸ್ತಿ ಹಾಗೂ ಅದರಲ್ಲಿರುವ ಶ್ರೀ ದುರ್ಗಾ ಇಂಟರ್ ನ್ಯಾಷನಲ್ ಹೋಟೆಲ್ ಕಟ್ಟಡ ಮತ್ತು ಬಾಡಿಗೆ ಅಂಗಡಿ ಕೋಣೆಗಳು. ಅದೇ ರೀತಿ ನಗರದ ಮಸೀದಿ ರಸ್ತೆಯಲ್ಲಿರುವ ಸರ್ವೆ ನಂಬ್ರ 120/14ರಲ್ಲಿನ 26 ಸೆಂಟ್ಸ್ ಜಾಗದಲ್ಲಿರುವ ಶಂಕರ್ ಬಿಲ್ಡಿಂಗ್ಸ್ನ ವಾಣಿಜ್ಯ ಕಟ್ಟಡ, ಅದರಲ್ಲಿರುವ ಅಂಗಡಿ ಕೋಣೆಗಳು, ನಗರದ ಬಾಳಿಗಾ ಟವರ್ ನಲ್ಲಿರುವ ಸುಮಾರು 210 ಅಡಿ ಚದರ ಅಡಿ ವಿಸ್ತೀರ್ಣದ ವಾಣಿಜ್ಯ ಅಂಗಡಿ ಕೋಣೆ, ಶಿವಳ್ಳಿ ಗ್ರಾಮದ ಇಂದ್ರಾಳಿಯಲ್ಲಿರುವ 4500 ಚದರಡಿ ವಿಸ್ತೀರ್ಣದ ವಾಸದ ಮನೆ..
ವೀಲುನಾಮೆಯಲ್ಲಿ ಏನಿತ್ತು..? : ನನ್ನ ಪತ್ನಿ ಬೇರೆ ವ್ಯಕ್ತಿಯ ಜತೆ ಅನೈತಿಕ ಸಂಬಂಧ ಹೊಂದಿದ್ದು ಈ ವಿಚಾರದಲ್ಲಿ ನನ್ನ ಪತ್ನಿ ಮತ್ತು ನನ್ನ ಮಗ ನನಗೆ ದೈಹಿಕ ಹಲ್ಲೆ ನಡೆಸಿದ್ದಾರೆ. ನಾನು ಆಗಸ್ಟ್ ನಲ್ಲಿ ವಿದೇಶಕ್ಕೆ ಹೋಗಲಿದ್ದು ಈ ಮಧ್ಯೆ ನನ್ನ ಜೀವಕ್ಕೆ ಪತ್ನಿ ಮತ್ತು ಮಗನಿಂದ ಅಪಾಯ ಇರುವ ಕಾರಣ, ನನ್ನ ಆಸ್ತಿಯನ್ನೂ ಲಪಟಾಯಿಸುವ ಸಾಧ್ಯತೆ ಇರುವುದರಿಂದ ಆಸ್ತಿಗಳ ಬಗ್ಗೆ ವೀಲುನಾಮೆಯನ್ನು ಬರೆದಿಡುತ್ತಿದ್ದೇನೆ ಎಂದು ಈಗಾಗಲೇ ಭಾಸ್ಕರ ಶೆಟ್ಟಿ ಇದರಲ್ಲಿ ತಿಳಿಸಿರುತ್ತಾರೆ.ಒಂದು ವೇಳೆ ನನ್ನ ಜೀವಕ್ಕೆ ಅಪಾಯವಾಗಿ ನಾನು ಅಕಾಲಿಕ ಮರಣಕ್ಕೀಡಾದಲ್ಲಿ ನನ್ನ ಎಲ್ಲಾ ಹಕ್ಕಿನ ಚರಾಚರ ಆಸ್ತಿಗಳು, ಅವುಗಳಲ್ಲಿರುವ ವಾಣಿಜ್ಯ ಕಟ್ಟಡಗಳು, ಬಾಡಿಗೆ ಹಣ, ಬ್ಯಾಂಕ್ ಖಾತೆಯಲ್ಲಿರುವ ಹಣ, ನನ್ನ ಹೆಸರಲ್ಲಿರುವ ವಿಮಾ ಪಾಲಿಸಿ ಹಣ ಎಲ್ಲವನ್ನೂ ನನ್ನ ತಾಯಿ ಗುಲಾಬಿ ಶೆಡ್ತಿಗೆ ನೀಡಿ, ಇತರರಿಗೆ ಯಾರಿಗೂ ಇದರಲ್ಲಿ ಪಾಲು ಸಂಬಂಧ ಬೇಡ. ಒಂದು ವೇಳೆ ನನಗಿಂತ ಮೊದಲು ತಾಯಿ ನಿಧನ ಹೊಂದಿದರೆ ಕಾಲಾನಂತರದಲ್ಲಿ ತಲಾ ಶೇ. 10ರಂತೆ ಮೂವರು ಸಹೋದರಿಯರಿಗೆ ಪಾಲು ಸಿಗಬೇಕು ಉಳಿದ ಆಸ್ತಿಯನ್ನು ಸರಿಯಾಗಿ ಭಾಗ ಮಾಡಿ ಮೂವರು ಸಹೋದರರು ಹಂಚಿಕೊಳ್ಳಬೇಕೇ ಹೊರತು ಪತ್ನಿ ಹಾಗೂ ಮಗನಿಗೆ ಈ ಆಸ್ತಿಗಳಲ್ಲಿ ಹಕ್ಕಿರಬಾರದು ಎಂದು ಉಲ್ಲೇಖಿಸಲಾಗಿದೆ.
ವಿದೇಶದಲ್ಲೂ ಆರು ಮಾಲ್ ಗಳಿದ್ದು ಇದನ್ನು ಸೋದರರಾದ ಸುರೇಶ್ ಮತ್ತು ಅಶೋಕ್ ಶೆಟ್ಟಿ ನೋಡಿಕೊಳ್ಳುತ್ತಿದ್ದು ಇದರ ಸಂಪೂರ್ಣ ಹಕ್ಕು ನನ್ನ ಸಹೋದರರಿಗೇ ಇರಲಿ ಎಂದೂ ಬರೆದಿದ್ದಾರೆ.ಹಿಂದೂ ಅನುಕ್ರಮ ಕಾಯ್ದೆ 1956ರಂತೆ ಒಬ್ಬ ವ್ಯಕ್ತಿ ಕೊಲೆಗೀಡಾದಲ್ಲಿ ಆ ವ್ಯಕ್ತಿಯ ಕೊಲೆ ಮಾಡಿದವರು ಅಥವಾ ಪ್ರಚೋದನೆ ನೀಡಿದವರು ಮೃತನ ಆಸ್ತಿಗೆ ವಾರಸುದಾರರಾಗಿದ್ದರೂ ಆ ಆಸ್ತಿ ಹಕ್ಕಿನಿಂದ ಅವರು ಅನರ್ಹರಾಗಿರುತ್ತಾರೆ. ಇದೀಗ ಭಾಸ್ಕರ ಶೆಟ್ಟಿ ಅವರ ಆಸ್ತಿ ಬಗ್ಗೆಯೂ ನ್ಯಾಯವಾದಿ ವಿನಯ ಆಚಾರ್ಯ ಸಾಕ್ಷಿಯಾಗಿದ್ದು ಅವರು ಈ ಬಗ್ಗೆ ಮಾಹಿತಿಯನ್ನೂ ನೀಡಿದ್ದಾರೆ. ಈ ಮಧ್ಯೆ ಪತ್ನಿ ರಾಜೇಶ್ವರಿ ಆಸ್ತಿ ವಿಚಾರವಾಗಿ ಕಾನೂನು ಮೆಟ್ಟಿಲೇರಿದ್ದು ಈ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.