ಉಡುಪಿ: ಸದಾ ಒಂದಲ್ಲವೊಂದು ವಿಷಯದಲ್ಲಿ ವಾಕ್ಸಮರ ನಡೆಸುತ್ತಾ, ರಾಜಕೀಯವಾಗಿ ಭಾರೀ ವಿರೋಧಿಗಳಾಗಿದ್ದ ಉಡುಪಿ ಶಾಸಕ ರಘುಪತಿ ಭಟ್ ಹಾಗೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಒಟ್ಟಾಗಿ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಜಿಲ್ಲೆಯ ಜನರ ಗಮನ ಸೆಳೆದಿದ್ದಾರೆ.
ಶಾಸಕ ರಘುಪತಿ ಭಟ್ ಅವರು, ಉಡುಪಿ ವಿಧಾನಸಭಾ ಕ್ಷೇತ್ರದ ಹಡಿಲು ಬಿದ್ದ 2000 ಎಕರೆ ಕೃಷಿ ಭೂಮಿಯಲ್ಲಿ ಭತ್ತದ ಬೇಸಾಯ ನಡೆಸುವ ಕೃಷಿ ಕ್ರಾಂತಿ ಮಾಡುತ್ತಿದ್ದಾರೆ. ಆದರೆ ಈ ಕಾರ್ಯ, ಪ್ರಶಂಸೆ ಜೊತೆಗೆ ಕೋವಿಡ್ ನಿಯಮವನ್ನು ಮೀರಿ ಹೆಚ್ಚಿನ ಜನ ಸೇರಿಸುತ್ತಿದ್ದಾರೆ ಅಂತ ಟೀಕೆಗೂ ಗುರಿಯಾಗಿತ್ತು. ಇದರ ನಡುವೆ ಮಾಜಿ ಸಚಿವ ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜ್ ಕೂಡ ಹಡಿಲು ಭೂಮಿಯಲ್ಲಿ ಬೇಸಾಯ ಮಾಡದಂತೆ, ಅಭಿವೃದ್ಧಿ ಕಾರ್ಯಗಳ ಕಡೆ ಗಮನಹರಿಸುವಂತೆ ಶಾಸಕರ ವಿರುದ್ಧ ಹೇಳಿಕೆ ನೀಡಿದ್ರು. ಆದರೆ, ಯಾವುದೇ ದ್ವೇಷ ಇಟ್ಟುಕೊಳ್ಳದೇ ಶಾಸಕ ರಘುಪತಿ ಭಟ್ ಅವರ ಹಡಿಲು ಬಿದ್ದ ಕೃಷಿ ಭೂಮಿಯಲ್ಲಿ ನಾಟಿ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಚ್ಚರಿ ಮೂಡಿಸಿದ್ದಾರೆ.
ಮಾಜಿ ಸಚಿವರ ಮನೆ ಇರುವ ಉಪ್ಪೂರು ಗ್ರಾಮದಲ್ಲಿ ಶಾಸಕ ರಘುಪತಿ ಭಟ್ ಮತ್ತು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಜಂಟಿಯಾಗಿ ಭತ್ತದ ಗದ್ದೆ ನಾಟಿ ಮಾಡಿದ್ದಾರೆ. ನಾಟಿ ಕಾರ್ಯ ಮುಗಿದ ನಂತರ ಶಾಸಕ ಭಟ್ ಮಾಜಿ ಸಚಿವರ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿದ್ದಾರೆ. ಪ್ರಮೋದ್ ಮಧ್ವರಾಜ್ ಬಂಗಲೆಯ ಗೋಶಾಲೆಯಲ್ಲಿ ಹಳೆಯ ಗೆಳೆಯರು ಕೆಲಕಾಲ ಕಳೆದಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಇವರಿಬ್ಬರು ಪ್ರತಿಸ್ಪರ್ಧಿಗಳಾದರೂ ಒಳ್ಳೆಯ ಸ್ನೇಹಿತರು.
ರಾಜಕೀಯದಲ್ಲಿ ಸದಾಕಾಲ ಟೀಕಿಸುತ್ತಲೇ ಇರುವ ಇಬ್ಬರ ಗೆಳೆತನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಬರುತ್ತಾರೆ ಎಂದು ಸುದ್ದಿಯಾಗಿತ್ತು. ಹಳೆ ಗೆಳೆಯರ ಹೊಸ ಸಮ್ಮಿಲನ ರಾಜಕೀಯ ವಲಯದಲ್ಲಿ ನಾನಾ ಕುತೂಹಲಕಾರಿ ಚರ್ಚೆಗಳನ್ನು ಹುಟ್ಟುಹಾಕಿದೆ. ಪ್ರಮೋದ್ ಬಿಜೆಪಿ ಸೇರ್ತಾರಾ ಅಂತ ಬಿಸಿ ಬಿಸಿ ಚರ್ಚೆ ಉಡುಪಿಯಲ್ಲಿ ಜೋರಾಗಿದೆ.