ಸುಬ್ರಹ್ಮಣ್ಯ : ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದಲ್ಲಿ ಕೂಡಾ ಸೀಲ್ ಡೌನ್ ಮಾಡಲಾಗಿದೆ. ಆದರೆ, ಸೀಲ್‌ಡೌನ್ ನಡುವೆಯೂ ಹೊರಜಿಲ್ಲೆಯಿಂದ ಭಕ್ತರು ಸುಬ್ರಹ್ಮಣ್ಯಕ್ಕೆ ಬರುತ್ತಿರುವುದು ಸಮಸ್ಯೆಯಾಗಿ ಪರಿಣಮಿಸಿದೆ.
ಸುಬ್ರಹ್ಮಣ್ಯದಲ್ಲಿ ಸೋಮವಾರದಿಂದ ಸೀಲ್ ಡೌನ್ ಮಾಡಲಾಗಿತ್ತಾದರೂ, ಪಂಚಾಯತ್ ವ್ಯಾಪ್ತಿಯ ರಸ್ತೆಗಳನ್ನು ಬಂದ್ ಮಾಡಿ ಚೆಕ್ ಪೋಸ್ಟ್ ತೆರೆಯಲಾಗಿತ್ತು. ಆದರೆ, ಭಕ್ತಾಧಿಗಳು ಒಳ ಮಾರ್ಗದ ಮೂಲಕ ದೇವಸ್ಥಾನದ ರಥಬೀದಿಗೆ ಆಗಮಿಸುತ್ತಿದ್ದು, ಇವರ ನಿಯಂತ್ರಣ ಕಷ್ಟವಾಗಿದೆ.
ಕುಕ್ಕೆ ಕ್ಷೇತ್ರಕ್ಕೆ ಭಕ್ತರ ಭೇಟಿಗೆ ನಿಷೇಧವಿದ್ದರೂ ಕೂಡಾ ಭಕ್ತರು ಸುಬ್ರಹ್ಮಣ್ಯಕ್ಕೆ ಆಗಮಿಸುತ್ತಿರುವುದು ಸ್ಥಳೀಯ ಪಂಚಾಯತ್ ಹಾಗೂ ಪೊಲೀಸರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕುಲ್ಕುಂದ ಭಾಗದಿಂದ ಸುಬ್ರಹ್ಮಣ್ಯ ಕಡೆಗೆ ಭಕ್ತಾಧಿಗಳ ವಾಹನಗಳು ಆಗಮಿಸುತ್ತಿದ್ದು, ಈ ಭಾಗದಲ್ಲಿರುವ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ಭಕ್ತಾಧಿಗಳ ವಾಹನಗಳಿಗೆ ದಂಡ ವಿಧಿಸಿ ಕಳುಹಿಸುತ್ತಿದ್ದಾರೆ.
ಸುಬ್ರಹ್ಮಣ್ಯ ಠಾಣಾಧಿಕಾರಿ ಒಮನ ನೇತೃತ್ವದಲ್ಲಿ ಸಿಬ್ಬಂದಿಗಳು ಹಾಗೂ ಗೃಹರಕ್ಷಕ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.