ಬೆಳ್ತಂಗಡಿ: ವಿದ್ಯುತ್ ಬಿಲ್ ವಿಚಾರದಲ್ಲಿ ಮೆಸ್ಕಾಂ ಪವರ್‌ಮ್ಯಾನ್‌ಗಳ ಮೇಲೆ ಗುರುವಾರ ರಾತ್ರಿ ಹಲ್ಲೆ ನಡೆಸಿದ ಘಟನೆ ಕೊಕ್ಕಡದಲ್ಲಿ ನಡೆದಿದ್ದು, ಈ ಸಂಬಂಧ ಧರ್ಮಸ್ಥಳದ ಅಜುಕುರಿ ನಿವಾಸಿ, ಲಾರಿ ಮಾಲಕ ಮತ್ತು ಚಾಲಕನಾಗಿರುವ ಆರೋಪಿ ರಿಜೇಶ್ (41) ನನ್ನು ಬಂಧಿಸಲಾಗಿದೆ.
ಕೊಕ್ಕಡದ ಪವರ್‌ಮ್ಯಾನ್‌ಗಳಾದ ದುಂಡಪ್ಪ ಜಂಗಪ್ಪಗೊಳ, ಉಮೇಶ್ ಹಲ್ಲೆಗೊಳಗಾದವರು.
ಹತ್ಯಡ್ಕ ಗ್ರಾಮದ ನಿವಾಸಿ ದಿ. ಕಾಂತು ಪೂಜಾರಿ ಅವರ ಹೆಸರಿನ ವಿದ್ಯುತ್ ಶುಲ್ಕ 3,530 ರೂ. ಇದ್ದು, ಇದನ್ನು ಪಾವತಿಸದ ಹಿನ್ನೆಲೆ ಸೆ. 19ರಂದು ಮಧ್ಯಾಹ್ನ ಪವರ್ ಮ್ಯಾನ್ ಉಮೇಶ್ ಅವರ ಮನೆಗೆ ತೆರಳಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಗೂಡ್ಸ್ ಲಾರಿ ಚಾಲಕರಾಗಿರುವ ರಿಜೇಶ್‌ನಿಗೆ ಮನೆಯವರು ಕರೆ ಮಾಡಿ ಪವರ್ ಮಾನ್‌ಗಳೊಂದಿಗೆ ಮಾತನಾಡಲು ಹೇಳಿದ್ದು, ಆತ ಪವರ್ ಮ್ಯಾನ್ ಉಮೇಶ್ ಅವರಿಗೆ ಕೊಲೆ ಬೆದರಿಕೆಯನ್ನು ಹಾಕಿದ್ದ. ಇದನ್ನು ಉಮೇಶ್ ಅವರು ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಬಗ್ಗೆ ಕೊಕ್ಕಡ ಜೆಇ ಕೃಷ್ಣೇಗೌಡ ತಾನು ಪರಿಶೀಲಿಸುವುದಾಗಿ ತಿಳಿಸಿದ್ದರು.
ಈ ಮಧ್ಯೆ ಸೆ. 22ರಂದು ದಿ. ಕಾಂತು ಪೂಜಾರಿ ಅವರ ಮನೆಯವರು ವಿದ್ಯುತ್ ಶುಲ್ಕ ಪಾವತಿಸಿ, ಮರು ಸಂಪರ್ಕವನ್ನು ನೀಡುವಂತೆ ಆದೇಶವನ್ನು ಮೆಸ್ಕಾಂ ಕಚೇರಿಗೆ ತಲುಪಿಸಿದ್ದರು. ಆ ಪ್ರಕಾರ ಪವರ್ ಮ್ಯಾನ್ ಉಮೇಶ್ ಮರು ಸಂಪರ್ಕವನ್ನು ನೀಡಿ ಬಂದಿದ್ದರು.ಗುರುವಾರ ರಾತ್ರಿ ಕೊಕ್ಕಡ ಜಂಕ್ಷನ್‌ನಲ್ಲಿ ಉಮೇಶ್ ಹಾಗೂ ಅವರ ಸಹೋದ್ಯೋಗಿಗಳು ದಿನಸಿ ಸಾಮಗ್ರಿಗಳನ್ನು ಖರೀದಿಸುವ ವೇಳೆ ರಿಜೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದರು. ಈ ಸಂದರ್ಭ ಉಪ್ಪಾರಪಳಿಕೆಯ ಪವರ್ ಮ್ಯಾನ್ ದುಂಡಪ್ಪ ಮಧ್ಯಪ್ರವೇಶಿಸಿ ಮಾತುಕತೆ ನಡೆಸಿ ತೆರಳುವಾಗ ಪಕ್ಕದಲ್ಲಿ ಇದ್ದ ಸೋಡಾ ಬಾಟಲಿಯಿಂದ ರಿಜೇಶ್ ದುಂಡಪ್ಪ ಅವರ ತಲೆಗೆ ಬಲವಾಗಿ ಹೊಡೆದಿದ್ದನು.ಗಂಭೀರ ಗಾಯಗೊಂಡ ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣಾ ಸಿಬಂದಿ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.