ಬೆಂಗಳೂರು: ಒಂದರಹಿಂದೊಂದು ಭಾರಿ ಬಜೆಟ್‌ನ, ದೊಡ್ಡ ಸ್ಟಾರ್‌ಗಳ ಸಿನಿಮಾಗಳನ್ನು ಬಾಚಿಕೊಳ್ಳುತ್ತಿರುವ ರಶ್ಮಿಕಾ ಈಗ ಪ್ರಸಿದ್ಧ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗೆ ರಾಯಭಾರಿಯಾಗಿ ಆಯ್ಕೆ ಆಗಿದ್ದಾರೆ. ವಿಶ್ವದ ಅತಿ ದೊಡ್ಡ ಫಾಸ್ಟ್ ಫುಡ್ ಜಾಯಿಂಟ್ ಎಂದು ಹೆಸರಾಗಿರುವ ಮೆಕ್‌ಡೊನಾಲ್ಡ್ಸ್ ಭಾರತದ ದಕ್ಷಿಣ ಹಾಗೂ ಪಶ್ಚಿಮ ಭಾಗಕ್ಕೆ ರಾಯಭಾರಿಯನ್ನಾಗಿ ರಶ್ಮಿಕಾರನ್ನು ಆಯ್ಕೆ ಮಾಡಲಾಗಿದೆ.
ದಕ್ಷಿಣ ಹಾಗೂ ಪಶ್ಚಿಮ ಭಾರತದ ರಾಜ್ಯಗಳಲ್ಲಿ ಮೆಕ್‌ಡೊನಾಲ್ಡ್ಸ್ ಜಾಹೀರಾತುಗಳಲ್ಲಿ ರಶ್ಮಿಕಾ ಮಂದಣ್ಣ ಮಿಂಚಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಂಸ್ಥೆಯ ದಕ್ಷಿಣ ಮತ್ತು ಪಶ್ಚಿಮ ಭಾಗದ ವ್ಯವಸ್ಥಾಪಕ ಅರವಿಂದ ಆರ್‌ಪಿ, ‘ಯುವ ಸಮುದಾಯಕ್ಕೆ ರಶ್ಮಿಕಾ ಮಂದಣ್ಣ ಬಹುಬೇಗ ಕನೆಕ್ಟ್ ಆಗುತ್ತಾರೆ. ಅವರೊಬ್ಬ ಯೂತ್ ಐಕಾನ್ ಆಗಿದ್ದಾರೆ. ಅವರು ನಮ್ಮ ಜೊತೆ ಸೇರಿಕೊಳ್ಳುತ್ತಿರುವುದು ಸಂತಸ ತಂದಿದೆ’ ಎಂದಿದ್ದಾರೆ.
‘ನ್ಯಾಷನಲ್ ಕ್ರಶ್’ ಎಂದು ಸಹ ಕರೆಯಲ್ಪಡುವ ರಶ್ಮಿಕಾ ಮಂದಣ್ಣ ತಮ್ಮ ಆಹಾರ ಪ್ರೀತಿಯನ್ನು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿರುತ್ತಾರೆ. ಕೊಡಗಿನ ಕುವರಿಯಾದ ರಶ್ಮಿಕಾ ಮಂದಣ್ಣ ಮಾಂಸಾಹಾರ ಪ್ರಿಯೆಯೂ ಆಗಿದ್ದು. ಸಸ್ಯಹಾರ, ಮಾಂಸಾಹಾರ ಎರಡನ್ನೂ ವಿತರಿಸುವ ಬೃಹತ್ ಫುಡ್ ಜಾಯಿಂಟ್ ಮೆಕ್‌ಡೊನಾಲ್ಡ್ಸ್‌ಗೆ ಸೂಕ್ತ ರಾಯಭಾರಿ ಆಗಬಹುದಾಗಿದೆ.