ಮಣಿಪಾಲ: ತುಳುನಾಡಿನ ಕಂಬಳ ಕೂಟಗಳಲ್ಲಿ ದೈತ್ಯ ಸಾಧನೆ ಮೆರೆದು ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನವಾಗಿದ್ದ ಕಂಬಳ ಆಸಕ್ತರ ಕಣ್ಮಣಿ ಎಣಿಸಿದ ಕೋಣ ‘ಬೋಳಂತೂರು ಕಾಟಿ’ ಇತಿಹಾಸದ ಪುಟ ಸೇರಿದ್ದಾನೆ . 28 ವರ್ಷ ಪ್ರಾಯದ ಕಾಟಿ, ಕಳೆದ 20 ವರ್ಷಗಳಿಂದ ಬೋಳಂತೂರು ಮನೆಯಲ್ಲಿದ್ದು ಇಂದು ಬೆಳಿಗ್ಗೆ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿ ಸೋಮವಾರ ಬೆಳಿಗ್ಗೆ ಅಸುನೀಗಿದೆ. ಕಳೆದ ಕೆಲವು ವರ್ಷಗಳಿಂದ ಕಂಬಳ ಕ್ಷೇತ್ರದಿಂದ ವಿಶ್ರಾಂತಿ ಪಡೆದಿದ್ದ ಕಾಟಿ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿತ್ತು.
ನೇಗಿಲು ಕಿರಿಯ ವಿಭಾಗದಲ್ಲಿ ಕಂಬಳ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಕಾಟಿ, ಶಿರ್ವ ಕಂಬಳದಲ್ಲಿ ಮೊದಲ ಸಲ ಬಹುಮಾನ ಪಡೆಯಿತು . ಕಾಟಿಯನ್ನು ಓದಿಸಿದವರು ಶಿರ್ವ ವಿಶ್ವನಾಥ್ ಪ್ರಭು. ಮುಂದೆ ಮೂರು ವರ್ಷ ಕಿರಿಯ ನೇಗಿಲು ವಿಭಾಗದಲ್ಲಿ ಕಾಟಿಯದ್ದೇ ಪಾರುಪತ್ಯ. ಆದರೆ ಕಾಟಿಗೆ ಜೋಡಿಯಾಗಿ ಓಡಲು ಸರಿಯಾದ ಕೋಣಗಳೇ ಸಿಗುತ್ತಿರಲಿಲ್ಲ. ಹಾಗಾಗಿ ಮೂರು ವರ್ಷದಲ್ಲಿ ನಾಲ್ಕು ಕೋಣಗಳ ಜೋಡಿಯಾಗಿ ಕಾಟಿ ಓಡಿದ್ದ.