ಪುತ್ತೂರು : ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯವನ್ನು ಮಾದರಿ ಕ್ಷೇತ್ರವನ್ನಾಗಿಸಲು60ಕೋ.ರೂ. ವೆಚ್ಚದ ಮಾಸ್ಟರ್ ಪ್ಲಾನ್ ರೂಪಿಸಿದ್ದು, ಇದಕ್ಕೆ ಕೆಲವೇ ದಿನಗಳಲ್ಲಿ ಅನುಮೋದನೆ ಸಿಗಲಿದೆ. ಐದಾರು ಕೋ.ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ದೇವಾಲಯಕ್ಕೆ ಸೇರಿರುವ 8 ಮನೆಗಳನ್ನು ತೆರವು ಮಾಡುವ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ದೇವಾಲಯದ ವಠಾರದಲ್ಲಿ ಮನೆ ತೆರವು ಕಾರ್ಯಾಚರಣೆಯನ್ನು ಪರಿಶೀಲಿಸಿದ ಬಳಿಕ ಕ್ಷೇತ್ರ ಹಾಗೂ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಅವರು ಮಾಹಿತಿ ನೀಡಿದರು.

ದೇವಾಲಯ ವತಿಯಿಂದ ಮನೆ ಪಡೆದವರು ಬೇರೆಡೆ ಸ್ವಂತ ಮನೆ ಹೊಂದಿದ್ದಾರೆ. ಹಾಗಾಗಿ ಬಹುತೇಕರು ಸ್ವಇಚ್ಛೆಯಿಂದಲೇ ಮನೆ ಬಿಟ್ಟುಕೊಟ್ಟಿದ್ದು, ಮತ್ತೆ ಕೆಲವರು ಆರಂಭದಲ್ಲಿ ವಿರೋಧಿಸಿ ಬಳಿಕ ನೀಡಿದ್ದಾರೆ. ಈಗ ಒಂದು ಮನೆ ಮಾತ್ರ ಬಿಟ್ಟುಕೊಡಲು ಬಾಕಿ ಇದೆ. ಮನೆ ತೆರವು ಮಾಡಿರುವ ಕುಟುಂಬಗಳಿಗೆ ನಾನು ವೈಯಕ್ತಿಕ ನೆಲೆಯಲ್ಲಿ ಒಟ್ಟು 17 ಲಕ್ಷರೂ. ನೀಡಲಾಗಿದೆ. ಪರ್ಯಾಯ ವ್ಯವಸ್ಥೆ ಇಲ್ಲದವರಿಗೆ ಉಚಿತವಾಗಿ ನಿವೇಶನ, ಮನೆಯನ್ನು ಒಂದು ವರ್ಷದೊಳಗಾಗಿ ನೀಡಲಾಗುವುದು ಎಂದು ಹೇಳಿದರು.
ಪುತ್ತೂರಿಗೆ ವೈದ್ಯಕೀಯ ಕಾಲೇಜು ವಿಶ್ವಾಸ
ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರಾತಿಗೆ ಸಂಬಂ ಧಿಸಿ 3 ತಿಂಗಳುಗಳಿಂದ ನಿರಂತರ ಪ್ರಯತ್ನಿಸುತ್ತಿದ್ದೇನೆ. ಮುಖ್ಯಮಂತ್ರಿ ಗಳು ಜಿಲ್ಲೆಗೆ ಬಂದಾಗಲೂ ಮಾತುಕತೆ ನಡೆಸಿದ್ದು, ಅವರು ಮೌಖಿಕ ಒಪ್ಪಿಗೆ ನೀಡಿದ್ದಾರೆ. ರಾಜೀವಗಾಂಧಿ ವಿವಿಯಲ್ಲಿ ಸುಮಾರು ರೂ. 1,600 ಕೋಟಿ ಠೇವಣಿ ಇದ್ದು, ಅದರ ಸದ್ಬಳಕೆ ಆಗಿಲ್ಲ. ಆ ಹಣದಿಂದಲೂ 10 ಮೆಡಿಕಲ್ ಕಾಲೇಜು ಆರಂಭಿಸಬಹುದು ಎಂದರು.
ಕೊಯಿಲ ಫಾರಂನಲ್ಲಿ 100 ಎಕ್ರೆ ಕೆಎಂಎಫ್‌ಗೆ
ಪಶು ಸಂಗೋಪನೆಗೆ ಸೇರಿರುವ ಕೊಯಿಲ ಫಾರಂನಲ್ಲಿ ತಳಿ ಸಂವರ್ಧನೆ, ಹಸುರು ಮೇವು, ರಸ ಮೇವು, ಟಿಎಂಆರ್ ತಯಾರಿಕೆ, ಹೈನುಗಾರರಿಗೆತರಬೇತಿ ಕೇಂದ್ರಸ್ಥಾಪನೆ ಮೊದಲಾದ ಚಟುವಟಿಕೆಗಳನ್ನು ನಡೆಸಲು ಸುಮಾರು 100 ಎಕ್ರೆ ಜಾಗವನ್ನು ಕೆಎಂಎಫ್‌ಗೆ 50 ವರ್ಷಗಳ ಕಾಲ ಉಚಿತವಾಗಿ ಭೋಗ್ಯಕ್ಕೆ ನೀಡುವಂತೆ ಮನವಿ ಬಂದಿದ್ದು, ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬೇಡಿಕೆ ಶೀಘ್ರ ಈಡೇರಿಕೆಗೆ ಯತ್ನಿಸಲಾಗುವುದು ಎಂದು ಶಾಸಕ ಅಶೋಕ್ ರೈ ಹೇಳಿದರು.