ಇಷ್ಟು ದಿನ ದುಬೈ ಟ್ರಿಪ್ನಲ್ಲಿ ಜಾಲಿ ಮಾಡ್ತಿದ್ದ ಧೋನಿ ಇದ್ದಕ್ಕಿದ್ದಂತೆ ಇದೀಗ ಕೋರ್ಟ್ ಮೆಟ್ಟಿಲೇರಿದ್ದಾರೆ. ನಂಬಿದವರೇ ಚಾಣಾಕ್ಷ ಧೋನಿಯನ್ನ ಯಾಮಾರಿಸಿ ಬಿಟ್ಟಿದ್ದಾರೆ. ಅದೂ ಒಂದಲ್ಲ, ಎರಡಲ್ಲ ಬರೋಬ್ಬರಿ 15 ಕೋಟಿ ರೂ. ವಂಚಿಸಿದ್ದಾರೆ.
ಧೋನಿ ವಿಶ್ವ ಕ್ರಿಕೆಟ್ ಲೋಕ ಕಂಡ ಶ್ರೇಷ್ಟ ಕ್ರಿಕೆಟಿಗ. ಕರಿಯರ್ ಆರಂಭಿಸಿದ ದಿನಗಳಲ್ಲಿ ತನ್ನ ಉದ್ದನೆಯ ಹೇರ್ಸ್ಟೈಲ್ನಿಂದ, ಸ್ಫೋಟಕ ಬ್ಯಾಟಿಂಗ್ನಿಂದ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು. ಆರಂಭದಲ್ಲಿ ಕೇವಲ ಬ್ಯಾಟಿಂಗ್ನಿಂದ ಎಲ್ಲರ ಮನ ಗೆದ್ದ ಧೋನಿ, ಆ ಬಳಿಕ ಎಲ್ಲರಿಗೂ ಇಷ್ಟವಾಗಿದ್ದು ಚಾಣಾಕ್ಷತೆಯಿಂದ. ಮಾಸ್ಟರ್ ಮೈಂಡ್ ಮಾಹಿಯ ಖತರ್ನಾಕ್ ಗೇಮ್ಪ್ಲಾನ್ಗಳಿಗೆ ಕಕ್ಕಾಬಿಕ್ಕಿಯಾಗದವರೇ ಇಲ್ಲ.
3 ಟೂರ್ನಿಗಳ ಗೆಲುವೇ ಮಾಹಿಯ ಮಾಸ್ಟರ್ಮೈಂಡ್ಗೆ ಸಾಕ್ಷಿ
ನಾಯಕನಾಗಿ ಧೋನಿ ತೆಗೆದುಕೊಂಡ ಸರ್ಪ್ರೈಸಿಂಗ್ ನಿರ್ಧಾರಗಳು ಒಂದಾ, ಎರಡಾ ವಿಶ್ವಕಪ್ನಂತಹ ಬಿಗ್ ಟೂರ್ನಮೆಂಟ್ಗಳಲ್ಲೇ ಚಾಣಾಕ್ಷ ಮಾಹಿ ಕೊಟ್ಟ ಮಾಸ್ಟರ್ಸ್ಟ್ಟ್ರೋಕ್ಗಳಿಗೆ ಗೆಲ್ಲೋ ಹಂತದಲ್ಲಿದ್ದ ಎದುರಾಳಿ ಪಡೆ ಸೋಲಿನ ಸುಳಿಗೆ ಸಿಲುಕಿದ್ದನ್ನ ನಾವು ನೋಡಿದ್ದೇವೆ. 2007ರ ಟಿ20, 2011ರ ಏಕದಿನ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ಈ 3 ಟೂರ್ನಿಗಳ ಗೆಲುವೇ ಮಾಹಿಯ ಮಾಸ್ಟರ್ಮೈಂಡ್ಗೆ ಸಾಕ್ಷಿಯಾಗಿದೆ.
ಆ ಬ್ಯಾಟ್ಸ್ಮನ್ ಎಂತಾ ಪಂಟರ್ ಆಗ್ಲಿ, ವಿಕೆಟ್ ಹಿಂದೆ ಧೋನಿ ಇದ್ದಾಗ, ಅಪ್ಪಿ ತಪ್ಪಿ ಕ್ರಿಸ್ ಬಿಟ್ರೆ ಸಾಕು ಕ್ಷಣಾದ್ರದಲ್ಲೇ ಬೆಲ್ಸ್ ಎಗರಿಸಿ ಬಿಡ್ತಾರೆ. ಪೆವಿಲಿಯನ್ಗೆ ಹೋಗೋದಷ್ಟೇ ಬ್ಯಾಟ್ಸ್ಮನ್ ಮುಂದಿರೋ ದಾರಿ. ಕೀಪಿಂಗ್, ಬ್ಯಾಟಿಂಗ್, ಕ್ಯಾಪ್ಟನ್ಸಿ ಎಲ್ಲ ವಿಚಾರದಲ್ಲೂ ಧೋನಿ ತಾನೊಬ್ಬ ಚಾಣಾಕ್ಷ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಆಫ್ ಫೀಲ್ಡ್ನಲ್ಲೂ ಧೋನಿ ಎಚ್ಚರಿಕೆಯ ಹೆಜ್ಜೆಯನ್ನ ಇಡೋದು. ಇಂತಾ ಮಾಸ್ಟರ್ ಮೈಂಡ್ ಇದೀಗ ವ್ಯವಹಾರದಲ್ಲಿ ಮೋಸ ಹೋಗಿದ್ದಾರೆ.
ಧೋನಿಗೆ ದೋಖಾ, 15 ಕೋಟಿ ವಂಚನೆ..!
ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ.. ಆನ್ಫೀಲ್ಡ್ ಹಾಗೂ ಆಫ್ ಫೀಲ್ಡ್ನ ಸದಾ ಎಚ್ಚರಿಕೆಯ ಹೆಜ್ಜೆಯನ್ನಿಡೋ ಧೋನಿ ಯಾಮಾರಿ ಬಿಟ್ಟಿದ್ದಾರೆ. ಎಲ್ಲರಿಂದ ಅಂತರ ಕಾಯ್ದುಕೊಂಡು ಅತಿಯಾಗಿ ನಂಬಿದ್ದವರನ್ನ ಮಾತ್ರ ಜೊತೆಯಲ್ಲಿಟ್ಟು ಕೊಂಡಿದ್ದ ಧೋನಿಗೆ ಇದೀಗ ನಂಬಿದವರೇ ದೋಖಾ ಮಾಡಿದ್ದಾರೆ. ಅದೂ, ಒಂದಲ್ಲ, ಎರಡಲ್ಲ, ಐದೂ ಅಲ್ಲ, ಬರೋಬ್ಬರಿ 15 ಕೋಟಿ.
ಧೋನಿಗೆ ದೋಖಾ ಮಾಡಿದ್ಯಾರು.? ಏನ್ ಕಥೆ.?
ಧೋನಿಗೆ ದೋಖಾ ಮಾಡಿದ ದ್ರೋಹಿಗಳೆಂದರೆ ಒಬ್ಬ ಮಾಹಿರ್ ದಿವಾಕರ್, ಇನ್ನೊಬ್ಬ ಸೌಮ್ಯ ವಿಶ್ವಾಸ್. ಇವರಿಬ್ಬರೂ ಧೋನಿಗೆ ಗೆಳೆಯರೆ. ಅದ್ರಲ್ಲೂ ಮಾಹಿರ್ ದಿವಾಕರ್ ಈಗಲ್ಲ. ಜೂನಿಯರ್ ಕ್ರಿಕೆಟ್ ಆಡ್ತಿದ್ದ ದಿನಗಳಿಂದಲೂ ಧೋನಿಗೆ ಪರಿಚಯ. ಇಬ್ಬರೂ ಒಟ್ಟಾಗಿ ಆರಂಭಿಕ ದಿನಗಳಲ್ಲಿ ಆಡಿದವರೇ. ಹೀಗಾಗಿಯೇ ಇವ್ರನ್ನ ನಂಬಿ ಧೋನಿ ಬ್ಯುಸಿನೆಸ್ಗೆ ಕೈ ಹಾಕಿದ್ರು. ಆದ್ರೆ, ಆಗಿದ್ದು ಮಾತ್ರ ದೋಖಾ.
ದುಡ್ಡು ಕೇಳಿದ್ರೆ ಕೊಡ್ಲಿಲ್ಲ.. ಷರತ್ತನ್ನೂ ಪಾಲಿಸಲಿಲ್ಲ..!
ಚಿಕ್ಕದಾದ ಗೆಳೆಯರ ಸರ್ಕಲ್ ಹೊಂದಿರೋ ವ್ಯವಹಾರವನ್ನೂ ಬಹುತೇಕ ಅವರೊಂದಿಗೆ ಮಾತ್ರ ಮಾಡೋದು. ಇದೇ ರೀತಿಯಲ್ಲಿ ತಾನು ನಂಬಿದ್ದ ಮಾಹಿರ್ ದಿವಾಕರ್, ಸೌಮ್ಯಾ ವಿಶ್ವಾಸ್ 2017ರಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸೋ ಪ್ಲಾನ್ ತಂದಾಗ ಓಕೆ ಅಂದಿದ್ರು. ಧೋನಿಯ ಹೆಸರಿನಲ್ಲೇ ಧೋನಿ ಗ್ಲೋಬಲ್ ಕ್ರಿಕೆಟ್ ಅಕಾಡೆಮಿ ತೆರೆದ್ರು. ನಮ್ಮ ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಅಕಾಡೆಮಿ ಸದ್ಯ ಕಾರ್ಯಾಚರಣೆ ನಡೆಸ್ತಿವೆ. ಅದ್ರೆ, ಧೋನಿಗೆ ಬರಬೇಕಾದ ಪಾಲು ಮಾತ್ರ ಬಂದೇ ಇಲ್ಲ.
ರೊಚ್ಚಿಗೆದ್ದು ರಾಂಚಿ ಕೋರ್ಟ್ ಮೆಟ್ಟಿಲೇರಿದ ಧೋನಿ.!
2017ರಲ್ಲಿ ಮಾಡಿಕೊಂಡ ಒಪ್ಪಂದದಂತೆ ಅಕಾಡೆಮಿಯ ಫ್ರಾಂಚೈಸ್ ಫೀ ಹಾಗೂ ಲಾಭದಲ್ಲಿ ಧೋನಿಗೆ ಶೇರ್ ಕೂಡ ಬೇಕಿತ್ತು. ಆದ್ರೆ, ಧೋನಿಗೆ ಇದ್ಯಾವುದೂ ಸಿಕ್ಕಿಲ್ಲ. ಇದ್ರ ಬಗ್ಗೆ ಕೇಳಿದಾಗಲೆಲ್ಲ ಆರ್ಕಾ ಸ್ಪೋರ್ಟ್ಸ್ ಕಂಪನಿ ಯಾಮಾರಿಸಿದೆ. ಲೀಗಲ್ ನೋಟಿಸ್ ಕೊಟ್ರೋ ಕ್ಯಾರೆ ಅಂದಿಲ್ಲ. ಅಗಸ್ಟ್ 15, 2021ರಂದು ಈ ಒಪ್ಪಂದ ಮುರಿಯಲು ಮಾಹಿ ಮುಂದಾಗಿ ನೋಟಿಸ್ ಕೊಟ್ಟಾಗಲೂ ಪಾರ್ಟ್ನರ್ಸ್ ಉತ್ತರವನ್ನೇ ನೀಡಿರಲಿಲ್ಲ. ಕಾದು ಕಾದು ಸುಸ್ತಾದ ಧೋನಿ ಇದೀಗ ರಾಂಚಿ ಕೋರ್ಟ್ನ ಮೆಟ್ಟಿಲೇರಿದ್ದಾರೆ.
ಯಾರನ್ನ ನಂಬಿದ್ರೋ ಅವರಿಂದಲೇ ಕೋಟಿ ಕೋಟಿ ವಂಚನೆಗೆ ಒಳಗಾಗಿರುವ ಧೋನಿ, ಸದ್ಯ ಕೋರ್ಟ್ ಮೆಟ್ಟಿಲೇರಿದ್ದಾರೆ. ಕಾನೂನಿನ ಹೋರಾಟದಲ್ಲಿ ಏನೆನಾಗುತ್ತೆ.? ಧೋನಿಗೆ ಬರಬೇಕಾದ ಪಾಲು ಬರುತ್ತಾ.? ಕಾದು ನೋಡಬೇಕಿದೆ..


























