ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ ಪಿ ಅಬ್ದುಲ್ ರಹಿಮಾನ್ ರವರ ಮೇಲೆ ಆಧಾರ ರಹಿತ ಆರೋಪ ಸತ್ಯಕ್ಕೆ ದೂರವಾಗಿದೆ.ಕನ್ಯಾನದ ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದ ಪ್ರಾಮಾಣಿಕ ಸುಮಾರು 22 ವರ್ಷದಿಂದ ಸ್ಥಳೀಯ ಜನಪ್ರತಿನಿಧಿಯಾಗಿದ್ದು 2 ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಾಮದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದವರು ನಾಡಿನ ಅಪಾರ ಜನ ಬೆಂಬಲವಿರುವ ಸ್ಥಳೀಯ ನಾಯಕರಾಗಿದ್ದಾರೆ. ಅಲ್ಲದೇ ಒಬ್ಬ ನಿಷ್ಟಾವಂತ ರಾಜಕಾರಣೀಯಾಗಿದ್ದು,ಪಕ್ಷ ಭೇದ ವಿಲ್ಲದೇ ಕನ್ಯಾನ ಗ್ರಾಮದಲ್ಲಿ ನಿಷ್ಕಲ್ಮಶ ಮನಸ್ಸಿನಿಂದ ಅದೆಷ್ಟೋ ಅಧಿಕಾರದ ಅವಧಿಯಲ್ಲಿ ರಾತ್ರಿ ಹಗಲೆನ್ನದೇ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದವರು. ಇದನ್ನು ಸಹಿಸದ ಕಾಣದ ಕೈಗಳು ಯುವತಿಯ ಬಳಿ ದೂರು ನೀಡುವಂತೆ ಕುಮ್ಮಕ್ಕು ನೀಡಿದ್ದಾರೆ ಎಂದು ವಲಯ ಕಾಂಗ್ರೆಸ್ ಸಮಿತಿ ಮತ್ತು ಪಂಚಾಯತ್ ಸದಸ್ಯರುಗಳು ಹೇಳಿದ್ದಾರೆ.
ಕನ್ಯಾನ ಗ್ರಾಮದ ಪಿಲಿಚಂಡಿಗುಡ್ಡೆ ಎಂಬಲ್ಲಿ ಅಕ್ರಮವಾಗಿ ನೀರು ಸಂಪರ್ಕ ಪಡೆದುದಕ್ಕೆ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಳ್ಳಿ ನೀರು ಸರಬರಾಜು ನಿಲುಗಡೆ ಮಾಡಲು ನಿರ್ಣಯ ಮಾಡಲಾಗಿತ್ತು. ಇದರಿಂದ ಪಂಚಾಯತ್ ಸಿಬ್ಬಂದಿಗಳು ನೀರು ಸರಬರಾಜು ತಡೆಯಲು ಮುಂದಾದಾಗ ಪಂಚಾಯತ್ ಸಿಬ್ಬಂದಿಗಳನ್ನು ಗಧರಿಸಿ ಅಧ್ಯಕ್ಷರ ಮೇಲೆ ಸಮಾಜ ವಿರೋಧಿ ಶಕ್ತಿಗಳ ಕುಮ್ಮಕ್ಕಿನಿಂದ ಆಧಾರ ರಹಿತ ಆರೋಪ ಮಾಡಿರುತ್ತಾರೆ ಹಾಗೂ ಅವರನ್ನು ರಾಜಕೀಯವಾಗಿ ತೇಜೋವಧೆ ಮಾಡುವ ಕುತಂತ್ರ ವಾಗಿರುತ್ತದೆ. ಈ ಆರೋಪವು ದುರುದೇಶದಿಂದ ಕೂಡಿದ್ದು ಮತ್ತು ಅತ್ಯಂತ ಖಂಡನೀಯವಾಗಿದೆ .ಈ ಮೊದಲು ಪಂಚಾಯತ್ ಚುನಾವಣೆ ಪೂರ್ವದಲ್ಲಿ ಈ ರೀತಿಯ ಆಪಾದನೆ ಮಾಡಿದ್ದು ಅದು ಸುಳ್ಳು ಎಂದು ಸಾಬೀತಾಗಿದೆ. ಈ ಬಗ್ಗೆ ನಾವು ಸತ್ಯಾಸತ್ಯತೆ ಬಗ್ಗೆ ಅವರು ಕರೆದ ಧಾರ್ಮಿಕ ಕ್ಷೇತ್ರಕ್ಕೆ ಪ್ರಮಾಣ ಮಾಡಲು ನಾವು 14 ಜನ ಸದಸ್ಯರು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ.
ಮಹಿಳೆಯ ದೂರು : ಸಂಜೆ 4.30 ಗಂಟೆಯ ವೇಳೆಗೆ ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷ ಯುವತಿಯ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಮಾತನಾಡಿ ನೆಲಕ್ಕೆ ದೂಡಿ ಹಾಕಿ ಮಾನಭಂಗ ಮಾಡಲು ಪ್ರಯತ್ನಿಸಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.
ಅದಕ್ಕೆ ಸ್ಪಷ್ಟೀಕರಣವೆಂಬಂತೆ, ಅದೇ ದಿನ 4.00 ಗಂಟೆಗೆ ಕನ್ಯಾನದಲ್ಲಿ ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಕೋವಿಡ್ ಸೋಂಕಿತ ಕುಟುಂಬಕ್ಕೆ ಕಿಟ್ ವಿತರಣೆಯಲ್ಲಿ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಭಾಗವಹಿಸಿದ್ದು, ಅದಕ್ಕೆ ತಕ್ಕಂತೆ ಸಾಕ್ಷ್ಯಾಧರಗಳು ಇವೆ ಎಂದು ವಲಯ ಕಾಂಗ್ರೆಸ್ ಸಮಿತಿ ಮತ್ತು ಪಂಚಾಯತ್ ಸದಸ್ಯರುಗಳು ಹೇಳಿದ್ದಾರೆ.