ವಿಟ್ಲ ಸಮೀಪದ ಕಂಬಳಬೆಟ್ಟು ಬಳಿಯ ಅಮೈ ಪ್ರದೇಶದಲ್ಲಿ ಸುಡುಮದ್ದುಗಳನ್ನು ತಯಾರಿಸುತ್ತಿದ್ದ ಆರೋಪದ ಮೇಲೆ ಸ್ಥಳೀಯ ನಿವಾಸಿ ಜಗದೀಶ ಪೂಜಾರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 13, 2026ರ ರಾತ್ರಿ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ವಿಟ್ಲ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಬಿ.ಎಸ್. ನಾಯಕ ಅವರ ನೇತೃತ್ವದಲ್ಲಿ ಪೊಲೀಸ್ ತಂಡ ಸ್ಥಳಕ್ಕೆ ದಾಳಿ ನಡೆಸಿತು.
ಸ್ಥಳ ಪರಿಶೀಲನೆಯ ವೇಳೆ, ಆರೋಪಿಯ ಮನೆಯ ಆವರಣದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳಿಲ್ಲದೆ ಸಂಗ್ರಹಿಸಿಟ್ಟಿದ್ದ ಸುಮಾರು 1.9 ಕೆ.ಜಿ ತೂಕದ ಸಂಶಯಾಸ್ಪದ ಸ್ಪೋಟಕ ವಸ್ತು ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಯ ವಿರುದ್ಧ ಎಕ್ಸ್‌ಪ್ಲೋಸಿವ್ ಆಕ್ಟ್ 1884ರ ಕಲಂ 9B, ಎಕ್ಸ್‌ಪ್ಲೋಸಿವ್ ಸಬ್‌ಸ್ಟಾನ್ಸಸ್ ಆಕ್ಟ್ 1908ರ ಕಲಂ 5 ಹಾಗೂ ಬಿಎನ್‌ಎಸ್ 2023ರ ಕಲಂ 288 ಅನ್ವಯ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.




























