ಕಡಬ: ಮನೆ ನಿರ್ಮಾಣ ವಿಚಾರದಲ್ಲಿ ಉಂಟಾದ ವೈಮನಸ್ಸಿನಿಂದಾಗಿ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಕಡಬ ತಾಲೂಕಿನಲ್ಲಿ ನಡೆದಿದೆ.
ಕಡಬ ಐತ್ತೂರು ನಿವಾಸಿಯಾದ ಬೇಬಿ ಕೆ.ಎಸ್. (35) ಅವರು ನೀಡಿದ ದೂರಿನ ಪ್ರಕಾರ, ತಮ್ಮ ಮನೆ ನಿರ್ಮಾಣ ಸ್ಥಳದಲ್ಲಿ ಬೋರ್‌ವೆಲ್ ತೋಡಿಸಿ ನೀರು ಸಿಕ್ಕಿದ ಹಿನ್ನೆಲೆಯಲ್ಲಿ, ಅಸೂಯೆಯಿಂದ ಗಂಡನ ಸಹೋದರ ಕುಸುಮಾಧರ (37) ಅವರು ಈ ಕೃತ್ಯಕ್ಕೆ ಮುಂದಾಗಿದ್ದಾನೆ ಎನ್ನಲಾಗಿದೆ.
ಘಟನೆ ಮೇ 6, 2026 ರಂದು ಬೆಳಿಗ್ಗೆ ನಡೆದಿದ್ದು, ಆರೋಪಿ ಕ್ಯಾನ್‌ನಲ್ಲಿ ಪೆಟ್ರೋಲ್ ತಂದು ಮಹಿಳೆಯ ಮೇಲೆ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಕೂಗಿಕೊಂಡಿದ್ದು, ಅವರ ಕಿರುಚಾಟ ಕೇಳಿ ಸಂಬಂಧಿಕರು ಹಾಗೂ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದ್ದಾರೆ.
ಜನರು ಬರುತ್ತಿರುವುದನ್ನು ಗಮನಿಸಿದ ಆರೋಪಿ ಪೆಟ್ರೋಲ್ ಕ್ಯಾನ್ ಹಾಗೂ ಬೆಂಕಿ ಪೊಟ್ಟಣವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅ.ಕ್ರ. 57/2026, ಕಲಂ 109(1) BNS-2023 ಅಡಿಯಲ್ಲಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


























