ಮಂಗಳೂರು: ಮಹಿಳೆಯೊಬ್ಬರ ಬಂಗಾರದ ಸರ ಕಸಿದುಕೊಂಡು ಪರಾರಿಯಾಗಿದ್ದ ಪ್ರಕರಣದಲ್ಲಿ ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಪೊಲೀಸರು ವಿಜಯಪುರದಲ್ಲಿ ಬಂಧಿಸಿದ್ದಾರೆ.
ಜೂನ್ 14ರಂದು ಸೂಟರ್‌ಪೇಟೆ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಸಮೀಪ ಮಹಿಳೆಯೊಬ್ಬರ ಬಂಗಾರದ ಸರವನ್ನು ಕಸಿದುಕೊಂಡು ಮೋಟಾರ್‌ಸೈಕಲ್‌ನಲ್ಲಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು.
ಈ ಕಾರ್ಯಾಚರಣೆಯ ವೇಳೆ ಜೂನ್ 26ರಂದು ನಗರದ ಪಾಂಡೇಶ್ವರದ ರೋಸಾರಿಯೋ ಶಾಲೆ ಸಮೀಪ ಮೂವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯುತ್ತಿದ್ದಾಗ, ಪ್ರಮುಖ ಆರೋಪಿ ಬಾಗಲಕೋಟೆ ನಿವಾಸಿ ಅಲ್ತಾಫ್ ಹುಸೈನ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಅವರನ್ನು ತಳ್ಳಿ ಪೊಲೀಸರ ವಶದಿಂದ ಪರಾರಿಯಾಗಿದ್ದನು. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದವು.
ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಅ.ಕ್ರ. 133/2026ರಂತೆ ಬಿಎನ್‌ಎಸ್‌ನ ಕಲಂ 121(1), 132 ಹಾಗೂ 262ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ನಿವಾಸಿಗಳಾದ ರವಿ ಬೌರಾ ಹಾಗೂ ಮೊಹಮ್ಮದ್ ಸಾಹೀಲ್ ಸಿದ್ದೀಖಿ @ ಮೊಹಮ್ಮದ್ ಸಾಹಿಲ್ ಎಂಬ ಆರೋಪಿಗಳನ್ನು ಈಗಾಗಲೇ ಬಂಧಿಸಿ, ಅವರಿಂದ ಕಳುವಾಗಿದ್ದ ಚಿನ್ನದ ಸರ ಹಾಗೂ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಪೊಲೀಸರ ವಶದಿಂದ ಪರಾರಿಯಾಗಿದ್ದ ಅಲ್ತಾಫ್ ಹುಸೈನ್‌ನ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ತಂಡವು ನಿರಂತರ ಕಾರ್ಯಾಚರಣೆ ನಡೆಸಿ, ಆರೋಪಿಯ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಆಗಸ್ಟ್ 10ರಂದು ವಿಜಯಪುರ ನಗರದಲ್ಲಿ ಬೆನ್ನಟ್ಟಿ ಬಂಧಿಸಿದೆ.
ಈ ಕಾರ್ಯಾಚರಣೆಯಲ್ಲಿ ಪಾಂಡೇಶ್ವರ ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮಾರುತಿ ಪಿ. ಹಾಗೂ ಸಿಬ್ಬಂದಿಗಳಾದ ಲಕ್ಷ್ಮಣ ಸಾಲೋಟಗಿ, ಸಾಗರ್ ಮತ್ತು ಆಂಜನೇಯ ಭಾಗವಹಿಸಿದ್ದರು.
ಬಂಧಿತ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಅಲ್ತಾಫ್ ಹುಸೈನ್ ವಿರುದ್ಧ ರಾಜ್ಯದ ವಿವಿಧ ಭಾಗಗಳಲ್ಲಿ ಆರು ಪ್ರಕರಣಗಳು ದಾಖಲಾಗಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.



























