ಪುತ್ತೂರು: ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಸ್ಲೀಪರ್ ಬಸ್‌ವೊಂದು ರಸ್ತೆ ಬದಿಯ ಮಣ್ಣಿನಲ್ಲಿ ಹೂತು ಒಂದು ಬದಿಗೆ ವಾಲಿ ನಿಂತ ಘಟನೆ ಮಂಗಳವಾರ ರಾತ್ರಿ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಸೇಡಿಯಾಪು ಬಳಿ ನಡೆದಿದೆ.
ಪುತ್ತೂರು ಬಸ್ ನಿಲ್ದಾಣದಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಬಸ್, ಸೇಡಿಯಾಪು ಬಳಿ ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ದಾರಿ ಮಾಡಿಕೊಡಲು ರಸ್ತೆ ಬದಿಗೆ ಸರಿದಿದೆ. ಈ ವೇಳೆ ಗಟ್ಟಿಯಾಗದ ಮಣ್ಣಿನಲ್ಲಿ ಬಸ್‌ನ ಚಕ್ರಗಳು ಹೂತುಹೋಗಿದ್ದು, ಬಸ್ ಒಂದು ಬದಿಗೆ ವಾಲಿ ನಿಂತಿದೆ.
ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ರಸ್ತೆ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ, ಅಗತ್ಯ ಸೂಚನಾ ಫಲಕಗಳು ಹಾಗೂ ರಿಫ್ಲೆಕ್ಟರ್‌ಗಳನ್ನು ಅಳವಡಿಸದಿರುವುದೇ ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾತ್ರಿ ವೇಳೆಯಲ್ಲಿ ವಾಹನ ಸವಾರರಿಗೆ ಕಾಮಗಾರಿ ಪ್ರದೇಶ ಸ್ಪಷ್ಟವಾಗಿ ಗೋಚರಿಸುವಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ಸ್ಥಳದಲ್ಲಿ ಸೂಕ್ತ ಸುರಕ್ಷತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.




























