ವಿಟ್ಲ: ಅಕ್ರಮ ಕೋಳಿ ಅಂಕ ಜೂಜಾಟ ನಡೆಯುತ್ತಿದ್ದ ಸ್ಥಳದ ಮೇಲೆ ವಿಟ್ಲ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿರುವ ಘಟನೆ ಪುಣಚ ಗ್ರಾಮದ ಪೆರಿಯಾಲ್ತಡ್ಕದಲ್ಲಿ ನಡೆದಿದೆ.
ಮೇ 30ರಂದು ರಾತ್ರಿ ವಿಟ್ಲ ಪೊಲೀಸ್ ಠಾಣೆಯ ಉಪ ನಿರೀಕ್ಷಕ ರಾಮಕೃಷ್ಣ ಅವರಿಗೆ ಅಕ್ರಮ ಕೋಳಿ ಅಂಕ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಅವರು ಠಾಣಾ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ದಾಳಿಯ ವೇಳೆ ಪುಣಚ ನಿವಾಸಿಗಳಾದ ದಿವಾಕರ ಪೂಜಾರಿ (46) ಹಾಗೂ ಯಶ್ವಂತ್ (34) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳದಿಂದ 4 ಅಂಕದ ಕೋಳಿಗಳು, ₹4,145 ನಗದು, ಕೋಳಿ ಅಂಕಕ್ಕೆ ಬಳಸಲಾಗುತ್ತಿದ್ದ ಕತ್ತಿ (ಬಾಳು) ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 119/2026 ದಾಖಲಿಸಲಾಗಿದ್ದು, ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 87 ಮತ್ತು 93, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960ರ ಕಲಂ 3 ಮತ್ತು 11 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 112ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಪೊಲೀಸರು ಅಕ್ರಮ ಜೂಜಾಟ ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.




























