ಬೆಂಗಳೂರು: ಜಗತ್ತಿನಲ್ಲಿ ತಾಯಿಗೆ ಅತ್ಯಂತ ಪೂಜ್ಯನೀಯ ಸ್ಥಾನವಿದೆ. ಜಗತ್ತಿನ ಎಲ್ಲಾ ಹೊರ ಶಕ್ತಿಗಳಿಂದ ಮಗುವನ್ನ ರಕ್ಷಿಸಬೇಕಾದವಳು ತಾಯಿ. ಆದರೆ ಇಲ್ಲಿ ರಕ್ಷಕಿಯಾಗಬೇಕಿದ್ದ ತಾಯಿಯೇ ಮಗಳ ಪಾಲಿನ ಮೃತ್ಯುಸ್ವರೂಪಿಯಾಗಿದ್ದಾಳೆ. ಇದಕ್ಕೆ ಬೆಂಗಳೂರಿನಲ್ಲಿ ನಡೆದಿರುವ ಕೊಲೆ ಪ್ರಕರಣವೇ ತಾಜಾ ಉದಾಹರಣೆಯಾಗಿದೆ.
ಕಳ್ಳಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ತಾನು ಹೆತ್ತ ಮಗುವನ್ನೇ ಕೊಲೆಗೈದು ವಿಕೃತಿ ಮೆರೆದಿದ್ದಾಳೆ. ಅಕ್ರಮ ಸಂಬಂಧ, ಮಗುವಿನ ಬಣ್ಣದ ಕಾರಣಕ್ಕೆ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ನಗರದ (Bengaluru) ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೆಹಳ್ಳಿ ವಿಲ್ಲಾವೊಂದರಲ್ಲಿ ಘಟನೆ ನಡೆದಿದ್ದು, ಮೃತಪಟ್ಟಿರುವ ಮಗುವನ್ನು ವೆನ್ನಿಲಾ (6 ವರ್ಷ) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ 3 ತಿಂಗಳ ಬಳಿಕ ಕೊಲೆ ಕೇಸ್ ದಾಖಲಾಗಿದೆ.
ಬೆಂಗಳೂರು ಮೂಲದ ಪ್ರಿಯಾಂಕಾ ಹಾಗೂ ದಾವಣಗೆರೆಯ (Davanagere) ಪ್ರವೀಣ್ 2007 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಎಲ್ಲವೂ ಅನ್ಯೋನ್ಯವಾಗಿತ್ತು. ದಂಪತಿಗೆ 17 ವರ್ಷದ ಹಾಗೂ 5 ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದರು. ಈ ನಡುವೆ ಕೆಲ ವರ್ಷಗಳ ಹಿಂದೆ ಪ್ರಿಯಾಂಕಾಳಿಗೆ ತನ್ನ ಕಾಲೇಜು ಗೆಳೆಯ ಮೋಹನ್ ಸಿಕ್ಕಿದ್ದ. ಇಬ್ಬರ ನಡುವೆ ಹೆಚ್ಚು ಸಲುಗೆ ಬೆಳೆದು ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಈ ವಿಷಯ ಪ್ರಿಯಾಂಕಾ ಪತಿ ಪ್ರವೀಣ್ ಕಿವಿಗೆ ಬಿದ್ದಿದೆ. ಈ ಬಗ್ಗೆ ಪತಿ ಪ್ರಶ್ನಿಸಿದಾಗ ಪ್ರಿಯಾಂಕಾ ತನಗೆ ಡಿವೋರ್ಸ್ ಕೊಡುವಂತೆ ಪ್ರವೀಣ್‌ಗೆ ಪಟ್ಟು ಹಿಡಿದಿದ್ದಳು ಎನ್ನಲಾಗಿದೆ.
ಇದಾದ ಬಳಿಕ ದಂಪತಿ ಜೊತೆಗೆ ಮೃತಪಟ್ಟಿರುವ ಮಗುವಿನೊಂದಿಗೆ ಕಾಡುಗೋಡಿಯಲ್ಲಿ ವಾಸವಾಗಿದ್ದರು. ಮಾ.24 ರಂದು ಮಗು ಏಕಾಏಕಿ ಮೃತಪಟ್ಟಿದೆ ಅಂತ ನಂಬಿಸಿದ್ದಾಳೆ. ಏನಾಯ್ತು ಎಂದು ಕೇಳಿದಾಗ ಮಗುವಿಗೆ ಬಿರಿಯಾನಿ ತಿನ್ನಲು ಕೊಟ್ಟಿದ್ದೆ. ಆಮೇಲೆ ಏನಾಯ್ತೋ ಗೊತ್ತಿಲ್ಲ ಎಂದಿದ್ದಾಳೆ. ಮತ್ತೊಮ್ಮೆ ಐಸ್‌ಕ್ರೀಮ್ ಕೊಟ್ಟು ಎಸಿ ಹಾಕಿ ಕಾರಿನಲ್ಲಿ ಮಲಗಿಸಿದ್ದೆ, ಆದರೆ ಮನೆಗೆ ಬಂದು ನೋಡಿದಾಗ ಮಗು ಸತ್ತುಹೋಗಿತ್ತು ಎಂದು ಕಥೆ ಹೆಣೆದಿದ್ದಾಳೆ.
ಈ ಖತರ್ನಾಕ್ ಲೇಡಿಯ ಮಾತುಗಳ ಮೇಲೆ ಸಂಶಯಪಟ್ಟಿದ್ದ ಪತಿ ಪ್ರವೀಣ್ ಮಗುವಿನ ಮರಣೋತ್ತರ ಪರೀಕ್ಷೆ ವರದಿಯನ್ನ ತನ್ನ ಸಂಬಂಧಿ ವೈದ್ಯರೊಬ್ಬರಿಗೆ ಕಳುಹಿಸಿದ್ದಾರೆ. ವಿದೇಶದಲ್ಲಿದ್ದ ವೈದ್ಯರು ಇದರಲ್ಲಿ ಏನೋ ಮಿಸ್ಟೇಕ್ ಆಗಿದೆ. ಏಸ್‌ಕ್ರೀಮ್ ಅಥವಾ ಬಿರಿಯಾನಿ ತಿಂದು ಮಗು ಸತ್ತಿಲ್ಲ ಎಂದು ಹೇಳಿದ್ದಾರೆ. ಬಳೀಕ ಪ್ರವೀಣ್ ನನ್ನ ಮಗಳನ್ನು ಉಸುರುಗಟ್ಟಿಸಿ ಕೊಲ್ಲಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಿಯಾಂಕಾಳ ಗೆಳೆಯ ಮೋಹನ್‌ನನ್ನ ಬಂಧಿಸಿದ್ದಾರೆ. ನಾಪತ್ತೆಯಾಗಿರುವ ಪ್ರಿಯಾಂಕಾಳಿಗಾಗಿ ಶೋಧ ಮುಂದುವರಿದಿದೆ. ಇನ್ನೂ ಮಗುವಿನ ಮೃತದೇಹದ ಎಫ್‌ಎಸ್‌ಎಲ್ ವರದಿ ಹೊರಬಿದ್ದಿಲ್ಲ. ಪ್ರಕರಣದ ತನಿಖೆ ಮುಂದುವರಿದಿದೆ.


























