ಮಂಗಳೂರು : ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಜನಾರ್ಧನ ಪೂಜಾರಿ ಅವರ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಕರಾವಳಿ ರಶೀದ್ ಟಿಪ್ಪು ಎಂಬವರ ವಿರುದ್ದ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
“ಜನಾರ್ಧನ ಪೂಜಾರಿ ಅವರು ತಮ್ಮ ಸ್ವಂತ ಪಕ್ಷದಲ್ಲಿ ನಿರಂತರ ಅಧಿಕಾರ ಅನುಭವಿಸಿ ಬಿಜೆಪಿ ಪರ ಬ್ಯಾಟಿಂಗ್ ಮಾಡುವ ವ್ಯಕ್ತಿ. ಈತನನ್ನು ಇಲ್ಲಿಯವರೆಗೆ ಹೈಕಮಾಂಡ್ ಕೂಡಾ ವಿರೋಧಿಸಿಲ್ಲ. ಒಂದು ವೇಳೆ ಈ ರೀತಿಯಾಗಿ ಅಲ್ಪಸಂಖ್ಯಾತ ವ್ಯಕ್ತಿ ಮಾತನಾಡಿದ್ದರೆ ಆ ವ್ಯಕ್ತಿಯನ್ನು ಕೂಡಲೇ ಕಾಂಗ್ರೆಸ್ ವಜಾ ಮಾಡುತ್ತಿತ್ತು. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎನ್ನುವ ಸಿದ್ದಾಂತವನ್ನು ನಿಲ್ಲಿಸಿ” ಎಂದು ರಶೀದ್ ಟಿಪ್ಪು ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಬರೆಯಲಾಗಿದೆ.
ಅಲ್ಲದೇ ಜನಾರ್ಧನ ಪೂಜಾರಿ ಅವರ ಫೋಟೋವನ್ನು ಅಪ್ಲೋಡ್ ಮಾಡಿ ಅವಹೇಳನಕಾರಿಯಾಗಿ ಬರೆದು ಪೋಸ್ಟ್ ಮಾಡಿದ್ದು, ಈ ಬಗ್ಗೆ ಬಿರುವೆರ್ ಕುಡ್ಲ ಸಂಘಟನೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.