ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಐಟಿಬಿಟಿ ಸಚಿವರಾಗಿದ್ದಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಬಹಿರಂಗ ಸಮರ ಸಾರಿದ್ದ ಪ್ರಿಯಾಂಕ್ ಖರ್ಗೆ ಈಗಿನ ಸಿಎಂ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಗೃಹ ಸಚಿವರು. ಅಧಿಕಾರ ಸ್ವೀಕರಿಸುತ್ತಿದ್ದಂತೆ ಬಿಜೆಪಿಯನ್ನು ಉದ್ದೇಶಿಸಿ ಎಕ್ಸ್ ಪೋಸ್ಟ್ ಮಾಡಿರುವ ಪ್ರಿಯಾಂಕ್, RSSಗೆ ಪರೋಕ್ಷ ಎಚ್ಚರಿಕೆ ನೀಡಿರೋದೀಗ ಮತ್ತೊಂದು ಸುತ್ತಿನ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಪ್ರಿಯಾಂಕ್ ಖರ್ಗೆ ಪೋಸ್ಟ್ನಲ್ಲಿ ಏನಿದೆ?
ರಾಜ್ಯ ಬಿಜೆಪಿ ನಾಯಕರೇ ಏಕಿಷ್ಟು ಚಿಂತೆಗೊಳಗಾಗಿದ್ದೀರಿ? ಎಂದು ಜೂನ್ 7ರಂದು ಎಕ್ಸ್ ಪೋಸ್ಟ್ ಮೂಲಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದರು. ಗೃಹ ಸಚಿವನಾಗಿ ಅಧಿಕಾರ ವಹಿಸಿಕೊಂಡು 48 ಗಂಟೆ ಕೂಡ ಆಗಿಲ್ಲ. ನಿಮ್ಮಲ್ಲಿನ ಭಯ, ಆತಂಕ, ನಿಮ್ಮಲ್ಲಿನ ದುಗುಡ ಎಲ್ಲವೂ ವ್ಯಕ್ತವಾಗುತ್ತಿದೆ. ಈಗಾಗಲೇ ಆರ್‌ಎಸ್‌ಎಸ್‌ನ್ನು ಬಳಸಿಕೊಂಡು ನನ್ನನ್ನು ನಿಂದಿಸುತ್ತಿದ್ದೀರಿ. ನನಗೆ ಜೀವ ಬೆದರಿಕೆ ಹಾಕುತ್ತಿದ್ದೀರಿ, ನೀವು ಮಾಡೋದನ್ನ ಮಾಡಿ. ಮುಖ್ಯವಾಗಿ, ನಿಮ್ಮ ‘ವ್ಯಕ್ತಿಗಳ ಸಂಘ’ಕ್ಕೆ ನನ್ನ ನಮಸ್ಕಾರವನ್ನೂ ತಿಳಿಸಿ. ನಿಮ್ಮ ರಾಜಕೀಯ ಮೇಲಧಿಕಾರದ ಸಂಘಟನೆಯ ನೋಂದಣಿಗಾಗಿ ದಾಖಲೆಗಳನ್ನು ಸಿದ್ಧವಾಗಿಡಲು ಹೇಳಿ ಎಂದು ಬರೆದುಕೊಂಡಿದ್ದೀಗ ಬಿಜೆಪಿಗರನ್ನು ಕೆರಳಿಸಿದೆ.



























