ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಪ್ರಕರಣದಲ್ಲಿ ಅನೇಕರ ಚಾರಿತ್ರ್ಯಹರಣವನ್ನು ನೋಡಿದ್ದೇವೆ. ಇಂದು ಷಡ್ಯಂತ್ರ ಹೊರ ಬಂದಿದೆ. ಅದೇ ರೀತಿ ರಾಜ್ಯದ ಬೇರೆ ಬೇರೆ ಹಿಂದೂ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಷಡ್ಯಂತ್ರ ನಡೆದಿತ್ತು. ಬೇರೆ ಬೇರೆ ಮೂಲಗಳಿಂದ ಹಣದ ಬಂದಿತ್ತು. ನಾವು ಜನಾಗ್ರಹ ಸಭೆಗಳನ್ನು ಮಾಡುತ್ತೇವೆ. ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ಕೇಂದ್ರ ಸರ್ಕಾರದ ಬಳಿ ಹೋಗುತ್ತೇವೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಆರೋಪ ವಿಚಾರವಾಗಿ ಇಂದು ನಗರದಲ್ಲಿ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಒಂದು ತಂಡ ಸಿದ್ದರಾಮಯ್ಯನ ಸುತ್ತಮುತ್ತ ಓಡಾಡಿಕೊಂಡು ಎಸ್ಐಟಿ ರಚನೆ ಮಾಡಿಸಿದ್ದರು. ನನಗೆ ಆಮಿಷ ಒಡ್ಡಲಾಯಿತು ಅಂತಾ ಕೋರ್ಟ್ನಲ್ಲಿ ಚಿನ್ನಯ್ಯ ಹೇಳುತ್ತಿದ್ದಾನೆ. ಇದು ನೇರವಾಗಿ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ. ಇದು ಕೇವಲ ಸರ್ಕಾರಕ್ಕೆ ಮೋಸ ಅಲ್ಲ, 7 ಕೋಟಿ ಜನರಿಗೆ ಮಾಡುತ್ತಿರುವ ಮೋಸ ಎಂದರು.
ಇನ್ನು ನಿನ್ನ ತಬ್ಬಿಕೊಳ್ಳುತ್ತೇನೆ ಎಂದು ಚಿನ್ನಯ್ಯಗೆ ನಟ ಪ್ರಕಾಶ್ ರಾಜ್ ಹೇಳಿದ್ದರಂತೆ. ಅವರ ಉದ್ದೇಶ ಏನಿತ್ತು, ಏಕೆ ಹಾಗೆ ಹೇಳಿದ್ದಾರೆ ಗೊತ್ತಿಲ್ಲ. ಚಿನ್ನಯ್ಯನಿಗೆ ಪ್ರೇರಣೆ ಕೊಟ್ಟ ಪ್ರಕಾಶ್ ರಾಜ್ ವೀರೇಂದ್ರ ಹೆಗ್ಗಡೆಗೆ ಜಂಟಲ್ ಮ್ಯಾನ್ ಎನ್ನುತ್ತಾರೆ. ಜನರ ಆಸ್ತಿಕತೆಯ ಮೇಲೆ ಆಗಿರುವ ಆಘಾತಕ್ಕೆ ಪ್ರಕಾಶ್ ರಾಜ್ ಕ್ಷಮೆ ಕೇಳುತ್ತಾರಾ? ಪ್ರಕಾಶ್ ರಾಜ್ ಕರೆ ಮಾಡಿದ್ದನ್ನು ವರದಿಯಲ್ಲಿ ದಾಖಲಿಸಿದ್ದಾರಾ? ರಾಜ್ಯ ಸರ್ಕಾರ SIT ಮಧ್ಯಂತರ ವರದಿ ಬಹಿರಂಗ ಮಾಡಬೇಕು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ವಸಂತ್ ಗಿಳಿಯಾರ್ ಮಾತನಾಡಿದ್ದು, ನಾವು ಧರ್ಮಸ್ಥಳ ಪರವಾದ ಪಿಆರ್ಓ ಅಲ್ಲ. ಧರ್ಮಸ್ಥಳದವರು ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಟ್ಟಿರಬಹುದು. ಮೂಳೆಗಳ ರಾಶಿ ಸಿಕ್ಕಿದೆ ಎಂದು ಯೂಟ್ಯೂಬ್ನಲ್ಲಿ ವರದಿ ಮಾಡಿದರು. ಎಲ್ಲಿದೆ ಮೂಳೆಗಳ ರಾಶಿ? ಸುಳ್ಳು ವರದಿಯನ್ನು ಎಸ್ಐಟಿ ತಡೆ ಹಾಕಿದ್ದರೆ ಇಷ್ಟು ಡ್ಯಾಮೇಜ್ ಆಗುತ್ತಿರಲಿಲ್ಲ. ಷಡ್ಯಂತ್ರ ಮಾಡಿದವರು ಕೆಲವು ಯೂಟ್ಯೂಬರ್ಗಳನ್ನು ಹಣ ಕೊಟ್ಟು ಸಾಕಿಕೊಂಡಿದ್ದಾರೆ. ಎಲ್ಲರೂ ಇದ್ದಿದ್ದು ಷಡ್ಯಂತ್ರ ಕೂಟದ ಮನೆಯಲ್ಲೇ. ಎಸ್ಐಟಿ ಮಧ್ಯಂತರ ವರದಿಯನ್ನು ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಅಂದು ನಾವು ಮಾಡಿರುವ ಆರೋಪಗಳು ನಿಜ ಅಂತಾ ಸಾಬೀತಾಗಿದೆ. ಇದರಲ್ಲಿ ಖಳ ನಟ ಅಥವಾ ಚಿತ್ರನಟ ಪ್ರಕಾಶ್ ರಾಜ್ ಹೆಸರು ಕೂಡ ಕೇಳಿಬಂದಿದೆ. ಚಿನ್ನಯ್ಯ ಜೊತೆ ಮಾತಾಡಿದ್ದು ನಿಜ ಅಂತಾ ಪ್ರಕಾಶ್ ರಾಜ್ ಒಪ್ಪಿಕೊಂಡಿದ್ದಾರೆ. ಎಸ್ಐಟಿ ಮುಖ್ಯಸ್ಥ ಮೊಹಂತಿ ಜೊತೆ ಮಾತನಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಗೃಹ ಸಚಿವರಾಗಿದ್ದ ಡಾ. ಜಿ ಪರಮೇಶ್ವರ್ ಮುಚ್ಚಿಟ್ಟ ಸತ್ಯವನ್ನು ಪ್ರಿಯಾಂಕ್ ಖರ್ಗೆ ಬಯಲು ಮಾಡಬೇಕು ಎಂದರು.
ವಿಕಾಸ್ ಕುಮಾರ್ ಪುತ್ತೂರು ಪ್ರತಿಕ್ರಿಯಿಸಿದ್ದು, ಚಿನ್ನಯ್ಯ ಎಂಬ ವ್ಯಕ್ತಿ ಷಡ್ಯಂತ್ರ ಆಗಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಷಡ್ಯಂತ್ರದ ಸೂತ್ರಧಾರಿ ಯಾರು ಎಂದು ಬಯಲಾಗಬೇಕಿದೆ. ಈ ಪ್ರಕರಣವನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ ಎಂಬ ಅನುಮಾನ ಇದೆ. ಹೊಸ ಗೃಹ ಸಚಿವರು ಎಲ್ಲವನ್ನೂ ಬಹಿರಂಗಪಡಿಸಲಿ. ಎಡಪಂಥೀಯರ ಮನವಿಯಂತೆ ಎಸ್ಐಟಿ ರಚಿಸಲಾಗಿದೆ ಎಂದು ಅಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಹೇಳಿದ್ದರು. ಆ ಎಡಪಂಥೀಯರು ಯಾರು ಅಂತಾ ಬಹಿರಂಗವಾಗಲಿ. ಸರ್ಕಾರ ಸೂಕ್ತ ತನಿಖೆ ನಡೆಸಬೇಕು ಎಂದಿದ್ದಾರೆ.



























