ಧರ್ಮಸ್ಥಳ:ಬಂಗ್ಲಗುಡ್ಡೆ ರಕ್ಷಿತಾರಣ್ಯಕ್ಕೆ ಪೂರ್ವಾನುಮತಿ ಪಡೆಯದೇ ಪ್ರವೇಶಿಸಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಇಬ್ಬರು ಯುವಕರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಹಿನ್ನೆಲೆಯಲ್ಲಿ, ಪೂರ್ವಾನುಮತಿ ಪಡೆಯದೇ ರಕ್ಷಿತಾರಣ್ಯ ಪ್ರವೇಶಿಸಿದ ಆರೋಪದ ಮೇರೆಗೆ ಅರಣ್ಯ ಇಲಾಖೆಯು ಇಬ್ಬರು ಯುವಕರ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಘಟನೆಗೆ ಸಂಬಂಧಿಸಿದಂತೆ ಇಬ್ಬರು ಯುವಕರು ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದಿದ್ದು, ಈ ವೇಳೆ ತಮ್ಮ ಮೇಲೆ ಯಾವುದೇ ಹಲ್ಲೆ ಅಥವಾ ತೊಂದರೆ ಉಂಟಾಗಿದ್ದರೆ ದೂರು ನೀಡುವಂತೆ ಪೊಲೀಸರು ಸೂಚಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಯುವಕರು, ಈ ಕುರಿತು ಚರ್ಚಿಸಿ ಅಗತ್ಯವಿದ್ದಲ್ಲಿ ದೂರು ನೀಡುವುದಾಗಿ ತಿಳಿಸಿದ್ದಾರೆ.
ಪ್ರಸ್ತುತ, ಈ ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

























