ಪುತ್ತೂರು: ಕಬಕ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಬೆಂಗಳೂರು ರೈಲಿಗಾಗಿ ಪ್ಲಾಟ್ ಫಾರ್ಮ್ ನಲ್ಲಿ ಕಾಯುತ್ತಿದ್ದ ಪ್ರಯಾಣಿಕನಿಗೆ ಹಲ್ಲೆ ನಡೆಸಿದ ಘಟನೆ ಸೆ.18ರಂದು ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.
ಆರ್ಲಪದವು ನಿವಾಸಿ ಚಿತ್ರಕಲಾವಿದ ಶ್ರೀನಿವಾಸ್ (40ವ)ಎಂಬವರು ಹಲ್ಲೆಗೊಳಗಾದವರು. ಅವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
‘ನಾನು ತಿರುಪತಿಯಲ್ಲಿರುವ ಸಹೋದರನಲ್ಲಿಗೆ ಹೋಗಲು ಸೆ.18ರಂದು ರಾತ್ರಿ ಬೆಂಗಳೂರು ರೈಲಿಗಾಗಿ ಕಾಯುತ್ತಿದ್ದೆ. ಈ ವೇಳೆ ಹಿಂದಿಯಲ್ಲಿ ಮಾತನಾಡಿಕೊಂಡು ಬಂದ ಐವರು ನನ್ನಲ್ಲಿ ಮಾತಿಗೆ ಮಾತು ಬೆಳೆಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಾಗ ಸ್ಟೇಷನ್ ಮಾಸ್ಟರ್ ಸ್ಥಳಕ್ಕೆ ಬಂದರು. ಕೊನೆಗೆ ಆಟೋ ರಿಕ್ಷಾ ಚಾಲಕರೊಬ್ಬರು ನನ್ನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಂದ ನನ್ನನ್ನು ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಮಾಹಿತಿ ಪಡೆದ ರೈಲ್ವೇ ಪೊಲೀಸರು ಮಂಗಳೂರಿಗೆ ಬಂದು ದೂರು ನೀಡುವಂತೆ ತಿಳಿಸಿದ್ದಾರೆ’ ಎಂದು ಗಾಯಾಳು ಶ್ರೀನಿವಾಸ್ ಅವರು ಹೇಳಿದ್ದಾರೆ.



























