ವಿಟ್ಲ, ಜೂನ್ 17: ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ವಿಟ್ಲ ಪೊಲೀಸ್ ಠಾಣೆಯ ಅ.ಕ್ರ. ನಂ. 24/2020 ಹಾಗೂ ಅ.ಕ್ರ. ನಂ. 34/2022 ಪ್ರಕರಣಗಳಲ್ಲಿ ಭಾರತೀಯ ದಂಡ ಸಂಹಿತೆಯ (IPC) ಕಲಂ 457 ಮತ್ತು 380ರಡಿ ಆರೋಪಿಯಾಗಿರುವ ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ನಿವಾಸಿ ಮೊಹಮ್ಮದ್ ಸಲಾಂ ಅಲಿಯಾಸ್ ಕೆ.ಎಂ. ಸಲಾಂ ಅಲಿಯಾಸ್ ಡಾಲರ್ ಸಲಾಂ ಎಂಬಾತನು ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದನು.
ಆರೋಪಿಯನ್ನು ವಿಟ್ಲ ಠಾಣಾ ಪೊಲೀಸರು ಜೂನ್ 16, 2026ರಂದು ಪುತ್ತೂರು ರೈಲ್ವೆ ನಿಲ್ದಾಣದ ಸಮೀಪ ಪತ್ತೆಹಚ್ಚಿ ಬಂಧಿಸಿ, ಬಳಿಕ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಇದಲ್ಲದೆ, ಆರೋಪಿತನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. ನಂ. 45/2023ರಡಿ ಐಪಿಸಿ ಕಲಂ 353, 332 ಹಾಗೂ 504 ಪ್ರಕರಣವೂ ದಾಖಲಾಗಿದ್ದು, ಆ ಪ್ರಕರಣದಲ್ಲಿಯೂ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಬಂಧನ ವಾರಂಟ್ ಜಾರಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ವಿಟ್ಲ ಪೊಲೀಸರ ಈ ಕಾರ್ಯಾಚರಣೆಯಿಂದ ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ಸು ದೊರೆತಿದೆ.



























