ವಿಟ್ಲ/ಪೆರುವಾಯಿ: ಪೆರುವಾಯಿ ಗ್ರಾಮದ ವ್ಯಾಪ್ತಿಯಲ್ಲಿರುವ ಎರಡು ಹಳೆಯ ಹಾಗೂ ಅಪಾಯಕಾರಿ ಸೇತುವೆಗಳಿಗೆ ತಕ್ಷಣ ನೂತನ ಸೇತುವೆ ನಿರ್ಮಿಸಿ, ತುರ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಯತೀಶ್ ಪೆರುವಾಯಿ ನೇತೃತ್ವದಲ್ಲಿ ಸಂಬಂಧಿತ ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿದೆ.
ಪೆರುವಾಯಿ-ಪೇರಡ್ಕ ಕರ್ನಾಟಕ-ಕೇರಳ ಸಂಪರ್ಕ ಸೇತುವೆ ಹಾಗೂ ಮಾಣಿಲ ಸಂಪರ್ಕ ಸೇತುವೆಗಳು ಸುಮಾರು 100 ವರ್ಷ ಹಳೆಯದಾಗಿದ್ದು, ಕಿರಿದಾದ ಹಾಗೂ ಶಿಥಿಲ ಸ್ಥಿತಿಯಲ್ಲಿವೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಹಲವು ಅಪಘಾತಗಳು ಸಂಭವಿಸಿದ್ದು, ಜೂನ್ 14ರಂದು ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದ ಘಟನೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಸೇತುವೆಗಳಿಗೆ ಕ್ರ್ಯಾಶ್ ಬ್ಯಾರಿಯರ್, ಎಚ್ಚರಿಕೆ ಫಲಕ, ರಿಫ್ಲೆಕ್ಟರ್ ಅಳವಡಿಕೆ ಹಾಗೂ ತಾಂತ್ರಿಕ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಲಾಗಿದೆ. ಜೂನ್ 20ರೊಳಗೆ ಕ್ರಮ ಕೈಗೊಳ್ಳದಿದ್ದರೆ ಜೂನ್ 22ರಂದು ಪೆರುವಾಯಿ ಪೇರಡ್ಕ ಜಂಕ್ಷನ್ ಬಳಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಶಾಂತಿಯುತ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಕುರಿತು ವಿಟ್ಲ ಪೊಲೀಸ್ ಠಾಣೆಗೂ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿದೆ.



























