ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಘಟನೆಯಲ್ಲಿ ಬಸ್ ಚಾಲಕರ ಸಮಯಪ್ರಜ್ಞೆಯಿಂದ ಸಂಭವನೀಯ ದೊಡ್ಡ ಅನಾಹುತವೊಂದು ತಪ್ಪಿದೆ.
ಮಂಗಳೂರಿನಿಂದ ಉಪ್ಪಿನಂಗಡಿಗೆ ಆಗಮಿಸಿದ್ದ ಬಸ್‌ನಲ್ಲಿದ್ದ ಪ್ರಯಾಣಿಕರು ಇಳಿದ ಬಳಿಕ, ಚಾಲಕ ಬಸ್ ಅನ್ನು ಬದಿಗೆ ನಿಲ್ಲಿಸುವ ಉದ್ದೇಶದಿಂದ ಹಿಂದಕ್ಕೆ ಚಲಾಯಿಸುತ್ತಿದ್ದರು. ಈ ವೇಳೆ ಬಸ್ ಏಕಾಏಕಿ ಮುಂದಕ್ಕೆ ಚಲಿಸಲು ಆರಂಭಿಸಿದೆ. ಚಾಲಕ ಬ್ರೇಕ್ ಪ್ರಯೋಗಿಸಿದರೂ ಬಸ್ ನಿಲ್ಲದ ಕಾರಣ, ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಅವರು ಅಪಘಾತವನ್ನು ತಪ್ಪಿಸುವ ನಿಟ್ಟಿನಲ್ಲಿ ರಸ್ತೆ ಮಧ್ಯಭಾಗದಲ್ಲಿದ್ದ ವೃತ್ತಕ್ಕೆ ಬಸ್ ಅನ್ನು ಡಿಕ್ಕಿ ಹೊಡೆಸಿ ನಿಲ್ಲಿಸಿದ್ದಾರೆ.
ಬಸ್ ನಿಯಂತ್ರಣ ತಪ್ಪಿ ಮುಂದಕ್ಕೆ ಸಾಗುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ವಾಹನಗಳು ಬಂದಿದ್ದರೆ ಅಥವಾ ವೃತ್ತದ ಸಮೀಪ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಸಂಚರಿಸುತ್ತಿದ್ದರೆ ಗಂಭೀರ ಅವಘಡ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಅದೃಷ್ಟವಶಾತ್ ಆ ಸಮಯದಲ್ಲಿ ಬಸ್‌ನ ಮಾರ್ಗದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ.
ಚಾಲಕರ ತಕ್ಷಣದ ನಿರ್ಧಾರ ಮತ್ತು ಸಮಯೋಚಿತ ಕ್ರಮದಿಂದ ದೊಡ್ಡ ದುರಂತ ತಪ್ಪಿದ್ದು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದರೂ, ಯಾವುದೇ ಅನಾಹುತ ಸಂಭವಿಸದಿರುವುದು ಸಮಾಧಾನದ ವಿಷಯವಾಗಿದೆ.


























