ಕಡಬ: ಜಾಗದ ತಕರಾರಿನ ಹಿನ್ನೆಲೆಯಲ್ಲಿ ವಿಧವೆಯೊಬ್ಬರ ಮನೆಗೆ ನುಗ್ಗಿ ಜೀವಬೆದರಿಕೆ ಹಾಕಿ, ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಯತ್ನಿಸಿದ ಆರೋಪದ ಮೇರೆಗೆ ನಾಲ್ವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐತ್ತೂರು ಗ್ರಾಮದ ಕೈಕುರೆ ನಿವಾಸಿ ದಿ. ಪವನ್ ಕುಮಾರ್ ಅವರ ಪತ್ನಿ ರಶ್ಮಿ ಎಂ.ಡಿ. (37) ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ದೂರಿನ ಪ್ರಕಾರ, ಪತಿ ಎಂಟು ತಿಂಗಳ ಹಿಂದೆ ಮೃತಪಟ್ಟಿದ್ದು, ತಾನು ಇಬ್ಬರು ಮಕ್ಕಳು ಹಾಗೂ ಅತ್ತೆಯೊಂದಿಗೆ ವಾಸವಾಗಿದ್ದೇನೆ. ನನಗೆ ಮತ್ತು ಅತ್ತಿಗೆ ನಡುವೆ ಜಾಗದ ತಕರಾರು ನಡೆಯುತ್ತಿದ್ದು, ಈ ಸಂಬಂಧದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.
ಈ ನಡುವೆ ನಾಲ್ವರು ಆರೋಪಿಗಳು ಬೊಲೆರೋ ವಾಹನದಲ್ಲಿ ಬಂದು ಮನೆ ಸಮೀಪ ಗಲಾಟೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, “ನಿನ್ನನ್ನು ಮತ್ತು ಮಕ್ಕಳನ್ನು ಮನೆಯಿಂದ ಓಡಿಸುತ್ತೇವೆ” ಎಂದು ಜೀವಬೆದರಿಕೆ ಹಾಕಿರುವುದಾಗಿ ರಶ್ಮಿಯವರು ದೂರಿನಲ್ಲಿ ಆರೋಪಿಸಿದ್ದಾರೆ.
ಮರುದಿನ ಬೆಳಗ್ಗೆ ಸುಮಾರು 8.30 ಗಂಟೆಗೆ ಅತ್ತಿಗೆ, ಆಕೆಯ ಇಬ್ಬರು ಮಕ್ಕಳು ಹಾಗೂ ಅತ್ತೆ ಸೇರಿಕೊಂಡು ಸಂತ್ರಸ್ತೆಯ ಸ್ವಾಧೀನದಲ್ಲಿರುವ ಕೃಷಿ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಯತ್ನಿಸಿದ್ದಾರೆ. ಆತಂಕಗೊಂಡು ತಾನು ತಂದೆ ಹಾಗೂ ಚಿಕ್ಕಪ್ಪನನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.
ತಮಗೆ ಹಾಗೂ ತಮ್ಮ ಮಕ್ಕಳಿಗೆ ಜೀವಭಯ ಉಂಟುಮಾಡಿರುವ ಆರೋಪದಡಿ ಮೋಹಿನಿ, ಸುನಿಲ್ ರೈ ಹಾಗೂ ಇತರ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ರಶ್ಮಿ ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.
ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆ 2023ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಕಡಬ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



























