ವಿಟ್ಲ: ಪ್ರಾಮಾಣಿಕತೆ ಮತ್ತು ಮಾನವೀಯತೆಯ ಮೌಲ್ಯವನ್ನು ಮೆರೆದ ಘಟನೆಯೊಂದು ವಿಟ್ಲದಲ್ಲಿ ನಡೆದಿದೆ. ಪಟ್ಟಣ ಪಂಚಾಯತ್ ತ್ಯಾಜ್ಯ ನಿರ್ವಹಣಾ ಘಟಕದ ವಾಹನ ಚಾಲಕರಾದ ಅರುಣ್ ಸಾಲ್ಯಾನ್ ಅವರು ರಸ್ತೆ ಬದಿಯಲ್ಲಿ ಬಿದ್ದಿದ್ದ ಪರ್ಸ್ ಅನ್ನು ಅದರ ಮಾಲೀಕರಿಗೆ ಸುರಕ್ಷಿತವಾಗಿ ಹಿಂತಿರುಗಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ವಿಟ್ಲದ ಸಯ್ಯದ್ ಕಂಬಳಬೆಟ್ಟು ಅವರ ಪರ್ಸ್ ಎಲ್ಲೋ ಪ್ರಯಾಣದ ವೇಳೆ ಕಳೆದುಹೋಗಿತ್ತು. ತ್ಯಾಜ್ಯ ಸಂಗ್ರಹಣೆಯ ಕಾರ್ಯದಲ್ಲಿದ್ದ ಅರುಣ್ ಸಾಲ್ಯಾನ್ ಅವರಿಗೆ ಪರ್ಸ್ ಸಿಕ್ಕಿದ್ದು, ಅದರಲ್ಲಿದ್ದ ದಾಖಲೆಗಳು ಹಾಗೂ ಗುರುತಿನ ಮಾಹಿತಿಯ ಆಧಾರದ ಮೇಲೆ ಮಾಲೀಕರನ್ನು ಪತ್ತೆಹಚ್ಚಿದರು.
ಬಳಿಕ ಸಯ್ಯದ್ ಕಂಬಳಬೆಟ್ಟು ಅವರನ್ನು ಸಂಪರ್ಕಿಸಿ, ಪರ್ಸ್‌ನಲ್ಲಿದ್ದ ಹಣ ಹಾಗೂ ಅಗತ್ಯ ದಾಖಲೆಗಳೊಂದಿಗೆ ಅದನ್ನು ಸುರಕ್ಷಿತವಾಗಿ ಹಿಂತಿರುಗಿಸಿದರು. ಅರುಣ್ ಸಾಲ್ಯಾನ್ ಅವರ ಈ ಪ್ರಾಮಾಣಿಕ ಕಾರ್ಯಕ್ಕೆ ಸ್ಥಳೀಯರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಸೇವೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಾಪಾಡುವ ಮೂಲಕ ಅರುಣ್ ಸಾಲ್ಯಾನ್ ಅವರು ಸಮಾಜಕ್ಕೆ ಉತ್ತಮ ಮಾದರಿಯಾಗಿದ್ದಾರೆ. ಅವರ ಈ ಕಾರ್ಯವು ಇತರರಿಗೂ ಪ್ರೇರಣೆಯಾಗಿದ್ದು, ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.



























