ಬಂಟ್ವಾಳ, ಜೂನ್ 24: ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಮೈರ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರು ಗಾಯಗೊಂಡ ಘಟನೆ ವರದಿಯಾಗಿದೆ.
ಪೊಲೀಸ್ ಮಾಹಿತಿಯ ಪ್ರಕಾರ, ಕಾಸರಗೋಡಿನ ತಲಂಗರ್ ಗ್ರಾಮದ ನಿವಾಸಿ ಕೃಷ್ಣ ಕೆ (54) ಅವರು ತಮ್ಮ KL-14-U-9535 ಸಂಖ್ಯೆಯ ಓಮಿನಿ ಕಾರಿನಲ್ಲಿ ಕುಟುಂಬ ಸದಸ್ಯರೊಂದಿಗೆ ಉಪ್ಪಿನಂಗಡಿಯಲ್ಲಿ ನಡೆಯುತ್ತಿದ್ದ ಸಂಬಂಧಿಯ ಮದುವೆಗೆ ತೆರಳುತ್ತಿದ್ದರು. ಕಾರಿನಲ್ಲಿ ಶರಣ್ಯಾ, ಸುಜಾತ, ಸುಮಂಗಲಾ ಹಾಗೂ ಪ್ರಕಾಶ್ ಪ್ರಯಾಣಿಸುತ್ತಿದ್ದರು.
ಬೆಳಿಗ್ಗೆ ಸುಮಾರು 11.30 ಗಂಟೆಗೆ ಕೇಪು ಗ್ರಾಮದ ಮೈರ ಬಳಿ ತಲುಪಿದಾಗ, ವಿಟ್ಲ ಕಡೆಯಿಂದ ಅಡ್ಯನಡ್ಕ ಕಡೆಗೆ ಬರುತ್ತಿದ್ದ KA-21-2776 ಸಂಖ್ಯೆಯ ಮಹಿಂದ್ರಾ ಜೀಪ್ ಚಾಲಕ ನಾರಾಯಣ ಭಟ್ ಅವರು ಅಜಾಗರೂಕ ಹಾಗೂ ದುಡುಕುತನದಿಂದ ವಾಹನ ಚಲಾಯಿಸಿ ಎದುರಿಗೆ ಬರುತ್ತಿದ್ದ ಓಮಿನಿ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಅಪಘಾತದ ಪರಿಣಾಮ ಶರಣ್ಯಾ ಅವರ ಮುಖಕ್ಕೆ, ಸುಜಾತ ಅವರ ಸೊಂಟಕ್ಕೆ ಹಾಗೂ ಸುಮಂಗಲಾ ಅವರ ಬಲಗೈಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮೊದಲು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಚಾಲಕ ಕೃಷ್ಣ ಕೆ ಹಾಗೂ ಪ್ರಯಾಣಿಕ ಪ್ರಕಾಶ್ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಜೀಪ್ ಚಾಲಕ ನಾರಾಯಣ ಭಟ್ ಅವರ ತಲೆಗೆ ಗಾಯವಾಗಿದ್ದು, ಸ್ಥಳೀಯರು ಅವರನ್ನು ಚಿಕಿತ್ಸೆಗಾಗಿ ವಿಟ್ಲಕ್ಕೆ ಕರೆದೊಯ್ದಿದ್ದಾರೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 139/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 281 ಹಾಗೂ 125(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
























