ವಿಟ್ಲ, ಜೂನ್ 24: ಪರವಾನಗಿ ಹಾಗೂ ಅಗತ್ಯ ದಾಖಲೆಗಳಿಲ್ಲದೆ ಕೆಂಪು ಕಲ್ಲು (ಲ್ಯಾಟರೈಟ್ ಕಲ್ಲು) ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಿಟ್ಲ ಪೊಲೀಸರು ವಶಪಡಿಸಿಕೊಂಡು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ರಾಮಕೃಷ್ಣ ಅವರು ಸಿಬ್ಬಂದಿಗಳಾದ ಹೆಚ್‌ಸಿ ಸುಚಿನ್, ಮಹೆಚ್‌ಸಿ ಚಿತ್ರಲೇಖಾ ಹಾಗೂ ಪಿಸಿ ಶ್ರೀಶೈಲ ಜೋರಾಪುರ ಅವರೊಂದಿಗೆ ಬುಧವಾರ ಮಧ್ಯಾಹ್ನ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮ ಪಂಚಾಯತ್ ಮುಂಭಾಗ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬೆರಿಪದವು ಕಡೆಯಿಂದ ಬಂದ ಲಾರಿಯನ್ನು ತಪಾಸಣೆಗೆ ನಿಲ್ಲಿಸಲಾಯಿತು.
ಲಾರಿ ಚಾಲಕನನ್ನು ವಿಚಾರಿಸಿದಾಗ ವಾಹನದಲ್ಲಿ ಸುಮಾರು 400 ಕೆಂಪು ಕಲ್ಲುಗಳಿರುವುದಾಗಿ ತಿಳಿಸಿದ್ದು, ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ಪರವಾನಗಿ ಅಥವಾ ದಾಖಲೆಗಳನ್ನು ತೋರಿಸಲು ವಿಫಲನಾಗಿದ್ದಾನೆ. ಬಳಿಕ ಪಂಚರ ಸಮಕ್ಷಮ ಲಾರಿಯನ್ನು ಪರಿಶೀಲಿಸಿದಾಗ KA-21-C-6257 ಸಂಖ್ಯೆಯ ಟಾಟಾ ಕಂಪನಿಯ ಲಾರಿಯಲ್ಲಿ 400 ಕೆಂಪು ಕಲ್ಲುಗಳು ಪತ್ತೆಯಾಗಿವೆ.
ಚಾಲಕ ಸಾದಿಕ್ (25), ಉಕ್ಕುಡ ದರ್ಬೆ ಮನೆ, ವಿಟ್ಲ ಕಸಬಾ ಗ್ರಾಮದ ನಿವಾಸಿಯಾಗಿದ್ದು, ಲಾರಿಯ ಮಾಲೀಕ ಸಂತೋಷ್ ಎಂದು ತಿಳಿದುಬಂದಿದೆ. ಲಾರಿಯ ಅಂದಾಜು ಮೌಲ್ಯ ₹18 ಲಕ್ಷ ಹಾಗೂ ಸಾಗಾಟ ಮಾಡಲಾಗುತ್ತಿದ್ದ ಕಲ್ಲುಗಳ ಮೌಲ್ಯ ₹7,200 ಎಂದು ಅಂದಾಜಿಸಲಾಗಿದೆ.
ಪ್ರಾಥಮಿಕ ವಿಚಾರಣೆಯಲ್ಲಿ ಕೇರಳ ರಾಜ್ಯದ ಧರ್ಮತ್ತಡ್ಕ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಇರಿಸಲಾಗಿದ್ದ ಕೆಂಪು ಕಲ್ಲುಗಳನ್ನು ಕಳವು ಮಾಡಿ ಸಾಗಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 138/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2), ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957ರ ಕಲಂ 4(1), 21 ಹಾಗೂ ಕರ್ನಾಟಕ ಮೈನರ್ ಮಿನರಲ್ ಕನ್ಸೆಷನ್ ನಿಯಮಾವಳಿ 1994ರ ಕಲಂ 3 ಮತ್ತು 44ರಡಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಲಾರಿ, ಚಾಲಕ ಹಾಗೂ ಕೆಂಪು ಕಲ್ಲುಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.

























