ವಿಟ್ಲ : ಆವರಣವಿಲ್ಲದ 43 ಅಡಿ ಆಳದ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಎಂಟು ತಿಂಗಳ ಗರ್ಭಿಣಿ ಹಸುವನ್ನು ಫ್ರೆಂಡ್ಸ್ ವಿಟ್ಲ ತಂಡ, ವಿಘ್ನೇಶ್ವರ ಕ್ರೇನ್ ಸಂಸ್ಥೆ ಮತ್ತು ಪಶುವೈದ್ಯರ ತಂಡ ಐದು ಗಂಟೆಗಳ ಸತತ ಕಾರ್ಯಾಚರಣೆಯ ಮೂಲಕ ಯಶಸ್ವಿಯಾಗಿ ರಕ್ಷಿಸಿದೆ.
ಘಟನೆ ವಿವರ:
ಕೇಪು ಗ್ರಾಮದ ಕುದ್ದು ಪದವು ನಿವಾಸಿ ಕಾಸಿಂ ಎಂಬವರ ಮನೆ ಸಮೀಪದ ಆವರಣ ಗೋಡೆಯಿಲ್ಲದ ಬಾವಿಗೆ, ಸ್ಥಳೀಯ ನಿವಾಸಿ ಸದಾನಂದ ಶೆಟ್ಟಿಯವರ ಎಂಟು ತಿಂಗಳ ಗರ್ಭಿಣಿ ಹಸು ಮೇಯಲು ಬಿಟ್ಟಿದ್ದ ವೇಳೆ ಆಕಸ್ಮಿಕವಾಗಿ ಬಿದ್ದಿದೆ. ನೀರಿನಲ್ಲಿ ಮುಳುಗಿ ಸಹಾಯಕ್ಕಾಗಿ ಗೋಳಿಡುತ್ತಿದ್ದ ಹಸುವನ್ನು ಕಂಡು ಸ್ಥಳೀಯರು ಅಸಹಾಯಕರಾಗಿ ನೆರೆದಿದ್ದರು.
ಸಾಹಸಮಯ ರಕ್ಷಣಾ ಕಾರ್ಯ:
ಮಾಹಿತಿ ತಿಳಿದ ಕೂಡಲೇ ಮುರಳೀಧರ ನೇತೃತ್ವದ “ಫ್ರೆಂಡ್ಸ್ ವಿಟ್ಲ” ತಂಡ ಸ್ಥಳಕ್ಕೆ ಧಾವಿಸಿದೆ. ಕುಸಿಯುವ ಹಂತದಲ್ಲಿದ್ದ ಬಾವಿಗೆ ಸಾಮಾಜಿಕ ಕಾರ್ಯಕರ್ತ ಮುರಳೀಧರ ಅವರು ಪ್ರಾಣದ ಹಂಗು ತೊರೆದು ಹಗ್ಗದ ಸಹಾಯದಿಂದ ಮೂರು ಬಾರಿ ಇಳಿದಿದ್ದಾರೆ. ಹಸುವಿನ ಹೊಟ್ಟೆ, ಎದೆ ಹಾಗೂ ಕುತ್ತಿಗೆಗೆ ಬೆಲ್ಟ್ ಅಳವಡಿಸಿ, ಐದು ಗಂಟೆಗಳಿಂದ ನೀರಿನಲ್ಲಿ ಒದ್ದಾಡುತ್ತಿದ್ದ ಹಸುವಿಗೆ ನೈತಿಕ ಸ್ಥೈರ್ಯ ತುಂಬಿದ್ದಾರೆ.
ಹಗ್ಗದ ಮೂಲಕ ಎಳೆದರೆ ಹೊಟ್ಟೆಯಲ್ಲಿರುವ ಕರುವಿಗೆ ಅಪಾಯವಾಗುವ ಸಾಧ್ಯತೆ ಇದ್ದುದರಿಂದ, ವಿಟ್ಲದ ವಿಘ್ನೇಶ್ವರ ಕ್ರೇನ್ ಮಾಲಿಕರನ್ನು ಸಂಪರ್ಕಿಸಿ ಸ್ಥಳಕ್ಕೆ ಕರೆಸಲಾಯಿತು. ಕ್ರೇನ್ ಮೂಲಕ ಅತ್ಯಂತ ಎಚ್ಚರಿಕೆಯಿಂದ ಹಸುವನ್ನು ಮೇಲಕ್ಕೆತ್ತಲಾಯಿತು.
ತುರ್ತು ಚಿಕಿತ್ಸೆ:
ರಕ್ಷಣೆಯ ಬಳಿಕ ಪಶುಸಂಗೋಪನಾ ಇಲಾಖೆಯ 1962 ಆಂಬ್ಯುಲೆನ್ಸ್ ಮೂಲಕ ಸ್ಥಳಕ್ಕೆ ಆಗಮಿಸಿದ ಪಶುಗಳ ತುರ್ತು ಚಿಕಿತ್ಸಕ ಡಾ. ಸುನಿಲ್ ಬಂಟ್ವಾಳ, ಚಾಲಕ ಜಯಗಣೇಶ್, ಅಡ್ಯನಡ್ಕ ಪಶು ಪರಿವೀಕ್ಷಕ ಲಕ್ಷ್ಮಣ ಸರವು ಅವರ ತಂಡ ಹಸುವಿಗೆ ಪ್ರಥಮ ಚಿಕಿತ್ಸೆ ನೀಡಿದರು. 43 ಅಡಿ ಆಳಕ್ಕೆ ಬಿದ್ದರೂ ಹಸುವಿನ ದೇಹಕ್ಕೆ ಗಂಭೀರ ಗಾಯಗಳಾಗಿಲ್ಲ ಎಂದು ವೈದ್ಯರ ತಂಡ ಸ್ಪಷ್ಟಪಡಿಸಿದೆ.
ನಿಸ್ವಾರ್ಥ ಸೇವೆಗೆ ಮೆಚ್ಚುಗೆ:
ಐದು ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಫ್ರೆಂಡ್ಸ್ ವಿಟ್ಲ ತಂಡ, ವಿಘ್ನೇಶ್ವರ ಕ್ರೇನ್ ಸಂಸ್ಥೆ ಮತ್ತು ಪಶುವೈದ್ಯರ ತಂಡ ಯಾವುದೇ ಫಲಾಪೇಕ್ಷೆ ಇಲ್ಲದೆ ಸಂಪೂರ್ಣ ಸೇವಾಕಾರ್ಯ ಮಾಡಿದೆ. ಗೋವಿನ ಮಾಲಿಕ ಸದಾನಂದ ಶೆಟ್ಟಿ ಕುಟುಂಬ ಕೈಮುಗಿದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಗರ್ಭಿಣಿ ಗೋಮಾತೆಯ ಪ್ರಾಣ ಉಳಿಸಿದ ತಂಡದ ಮಾನವೀಯತೆ ಮತ್ತು ಸಾಹಸಕ್ಕೆ ಸಾರ್ವಜನಿಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

























