ವಿಟ್ಲ: ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದು, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಜುಲೈ 4ರಂದು ಮಧ್ಯಾಹ್ನ ಅಕ್ರಮ ಮರಳು ಸಾಗಾಟ ನಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಅವರ ನೇತೃತ್ವದಲ್ಲಿ ಸಿಬ್ಬಂದಿ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಓಜಾಲ ಪ್ರದೇಶದಲ್ಲಿ ಪರಿಶೀಲನೆ ನಡೆಸಿದರು.
ಈ ವೇಳೆ KA-51-AA-3057 ಹಾಗೂ KA-21-C-6924 ನೋಂದಣಿ ಸಂಖ್ಯೆಯ ಮರಳು ತುಂಬಿದ ಎರಡು ಟಿಪ್ಪರ್ ಲಾರಿಗಳು ಪತ್ತೆಯಾಗಿವೆ. ಲಾರಿಗಳ ಚಾಲಕರಾದ ಪುತ್ತೂರು ತಾಲೂಕಿನ ಕೊಡಿಪಾಡಿ ನಿವಾಸಿ ಮೊಹಮ್ಮದ್ ಇರ್ಪಾನ್ (28) ಹಾಗೂ ಕಬಕ ನಿವಾಸಿ ನೌಷದ್ (26) ಅವರನ್ನು ವಿಚಾರಿಸಿದಾಗ, ಕಡಬ ತಾಲೂಕಿನ ಅಲಂಕಾರ್ ಪ್ರದೇಶದಿಂದ ಯಾವುದೇ ಪರವಾನಿಗೆ ಅಥವಾ ದಾಖಲಾತಿ ಇಲ್ಲದೆ ಮರಳನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಎರಡೂ ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 149/2026ರಡಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 303(2), ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ-1957ರ ಕಲಂ 4(1), 4(1ಎ), 21 ಹಾಗೂ ಕರ್ನಾಟಕ ಕಿರು ಖನಿಜ ನಿಯಮಗಳು-1994ರ ಕಲಂ 3 ಮತ್ತು 44ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

























