ಬೆಳ್ತಂಗಡಿ, ಜು. 6: ರಾಷ್ಟ್ರೀಯ ಹೆದ್ದಾರಿಯ ಲಾಯಿಲ ಜಂಕ್ಷನ್ ಸಮೀಪ ಸೋಮವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರ ಗಾಯಗೊಂಡಿದ್ದಾರೆ.
ಮಂಗಳೂರಿನ ಕಾಲೇಜೊಂದರ ನಾಲ್ವರು ವಿದ್ಯಾರ್ಥಿಗಳು ಕೊಟ್ಟಿಗೆಹಾರ ಸಮೀಪದ ದೇವರ ಮನೆಗೆ ಭೇಟಿ ನೀಡಿ ಸಂಜೆ ಹಿಂತಿರುಗುತ್ತಿದ್ದ ವೇಳೆ ಲಾಯಿಲ ಜಂಕ್ಷನ್ ಬಳಿ ಅವರ ಬೈಕ್ ಸ್ಕಿಡ್ ಆಗಿ ಪಲ್ಟಿಯಾಗಿದೆ. ಪರಿಣಾಮ ಬೈಕ್‌ನ ಹಿಂಬದಿ ಸವಾರ, ಮಂಗಳೂರು ನಿವಾಸಿ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಧೀರಜ್ (23) ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಸವಾರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಹೆದ್ದಾರಿಯಲ್ಲಿದ್ದ ಗುಂಡಿಗೆ ಬೈಕ್ ಬಿದ್ದ ಪರಿಣಾಮ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗಿದೆ. ಇದೇ ವೇಳೆ ಅಪರಿಚಿತ ವಾಹನವೊಂದು ಧೀರಜ್ ಅವರ ತಲೆಯ ಮೇಲೆ ಹರಿದಿರಬಹುದೆಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಆದರೆ ಈ ಕುರಿತು ಅಧಿಕೃತ ದೃಢೀಕರಣ ಇನ್ನಷ್ಟೇ ಆಗಬೇಕಿದೆ.
ಸ್ಥಳೀಯರ ಆರೋಪದಂತೆ, ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ, ರಸ್ತೆಯಲ್ಲಿನ ಗುಂಡಿಗಳು ಹಾಗೂ ಸಮರ್ಪಕ ಎಚ್ಚರಿಕೆ ಮತ್ತು ಸೂಚನಾ ಫಲಕಗಳ ಕೊರತೆ ಅಪಘಾತಕ್ಕೆ ಕಾರಣವಾಗಿರಬಹುದು. ಈ ಕುರಿತು ಸಂಬಂಧಿತ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.























