ಪುತ್ತೂರು: ಕೆಲಸಕ್ಕೆ ತೆರಳುತ್ತಿದ್ದ ಯುವತಿಗೆ ಚೂರಿ ತೋರಿಸಿ ಬೆದರಿಕೆ ಹಾಕಿದ ಆರೋಪದ ಮೇಲೆ ಆರು ಮಂದಿ ಯುವಕರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುರುಷರಕಟ್ಟೆಯಲ್ಲಿ ನಡೆದಿದೆ.
ವರದಿಯ ಪ್ರಕಾರ, ಯುವತಿ ಎಂದಿನಂತೆ ಮಂಗಳೂರಿಗೆ ಕೆಲಸಕ್ಕೆ ತೆರಳಲು ಪುರುಷರಕಟ್ಟೆಯಲ್ಲಿ ತನ್ನ ಸ್ಕೂಟಿಯನ್ನು ನಿಲ್ಲಿಸುತ್ತಿದ್ದ ವೇಳೆ ಯುವಕರ ಗುಂಪೊಂದು ಆಕೆಗೆ ಚೂರಿ ತೋರಿಸಿ ಬೆದರಿಕೆ ಹಾಕಿದೆ ಎನ್ನಲಾಗಿದೆ. ಘಟನೆಯಿಂದ ಆತಂಕಗೊಂಡ ಯುವತಿ ಸ್ಥಳದಿಂದ ಆಟೋರಿಕ್ಷಾದಲ್ಲಿ ಪುತ್ತೂರಿನತ್ತ ತೆರಳಿದ್ದಾಳೆ.
ಆದರೆ, ಯುವಕರ ತಂಡವು ಥಾರ್ ಕಾರಿನಲ್ಲಿ ಆಟೋವನ್ನು ಹಿಂಬಾಲಿಸಿ ಬಂದು ಮತ್ತೆ ಬೆದರಿಕೆ ಹಾಕಿದೆ ಎಂದು ಆರೋಪಿಸಲಾಗಿದೆ. ಈ ವೇಳೆ ನಡೆದ ಘಟನೆಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ತಿಳಿಸಲಾಗಿದೆ.
ಬಳಿಕ ಯುವತಿ ಈ ಕುರಿತು ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರಿಗೆ ಮಾಹಿತಿ ನೀಡಿದ್ದು, ಅವರ ಮೂಲಕ ಪೊಲೀಸರಿಗೆ ದೂರು ನೀಡಲಾಗಿದೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಆರೋಪಿತ ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

























