ಪುತ್ತೂರು, ಜು. 8: ಪುತ್ತೂರು ಭೂ ನ್ಯಾಯ ಮಂಡಳಿಯ ಸದಸ್ಯ ಹಾಗೂ ಸಮಾಜಸೇವಕರಾಗಿದ್ದ ನಿರಂಜನ್ ರೈ ಮಠಂತಬೆಟ್ಟು ಅವರ ನಿಧನಕ್ಕೆ ಪುತ್ತೂರು ಶಾಸಕ ಅಶೋಕ್ ರೈ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಠಂತಬೆಟ್ಟು ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ, ಜಿಲ್ಲಾ ಕಂಬಳ ಸಮಿತಿಯ ಉಪಾಧ್ಯಕ್ಷರಾಗಿ, ಕಂಬಳದ ವೀಕ್ಷಕ ವಿವರಣೆಕಾರ ಹಾಗೂ ತೀರ್ಪುಗಾರರಾಗಿ ನಿರಂಜನ್ ರೈ ಅವರು ಸಲ್ಲಿಸಿದ ಸೇವೆ ಸ್ಮರಣೀಯವಾಗಿದೆ. ಮೃದು ಸ್ವಭಾವದ ಸಜ್ಜನ ವ್ಯಕ್ತಿಯಾಗಿದ್ದ ಅವರು ಸಮಾಜದಲ್ಲಿ ಅಪಾರ ಗೌರವ ಗಳಿಸಿದ್ದರು ಎಂದು ಶಾಸಕರು ತಿಳಿಸಿದ್ದಾರೆ.
ನಿರಂಜನ್ ರೈ ಅವರ ಅಗಲಿಕೆ ವೈಯಕ್ತಿಕವಾಗಿಯೂ ಹಾಗೂ ಸಮಾಜಕ್ಕೂ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಮತ್ತು ದುಃಖ ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ಭಗವಂತ ಕರುಣಿಸಲಿ ಎಂದು ಶಾಸಕ ಅಶೋಕ್ ರೈ ಸಂತಾಪ ಸೂಚಿಸಿದ್ದಾರೆ.
ನಿರಂಜನ್ ರೈ ಅವರ ನಿಧನದ ಹಿನ್ನೆಲೆಯಲ್ಲಿ ಬೆಂಗಳೂರಿನ ತಮ್ಮ ಕಾರ್ಯಕ್ರಮವನ್ನು ಮೊಟಕುಗೊಳಿಸಿರುವ ಶಾಸಕ ಅಶೋಕ್ ರೈ, ಇಂದು ರಾತ್ರಿ ಆಗಮಿಸಿ ಮೃತರ ಅಂತಿಮ ದರ್ಶನ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
























