ಪುತ್ತೂರು: ಲ್ಯಾಬೊರೇಟರಿ ಕ್ಷೇತ್ರದಲ್ಲಿ ಹಲವು ಹೊಸತನಗಳ ಮೂಲಕ ಕಳೆದ ಹಲವಾರು ವರ್ಷಗಳಿಂದ ಪುತ್ತೂರು ಮತ್ತು ಸುತ್ತಮುತ್ತಲಿನ ಭಾಗದ ಜನರಿಗೆ ಅತ್ಯುತ್ತಮ ಗುಣಮಟ್ಟದ ಲ್ಯಾಬೊರೇಟರಿ ಸೇವೆಗಳನ್ನು ಒದಗಿಸುತ್ತಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯ ಮ್ಯಾನೇಜಿಂಗ್ ಡೈರೆಕ್ಟರ್ ಚೇತನ್ ಪ್ರಕಾಶ್ ಕಜೆ ಅವರಿಗೆ ೨೦೨೬ನೇ ಸಾಲಿನ ಪ್ರತಿಷ್ಠಿತ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ‘ಹೆಲ್‌ಏರ್ ಎಕ್ಸಲೆನ್ಸ್ ಪ್ರಶಸ್ತಿ-2026’ ಪ್ರಶಸ್ತಿಗೆ ಪ್ರದಾನ ಮಾಡಲಾಯಿತು.
ವೈದ್ಯಲೋಕದ ಅಪ್ರತಿಮ ಸಾಧಕರಿಗೆ ನೀಡುವ ಈ ಪ್ರಶಸ್ತಿಯನ್ನು ಆ.2ರಂದು ಬೆಂಗಳೂರಿನ ಕೆನ್ಸಿಂಗ್ಟನ್ ರಸ್ತೆಯ ಕಾನಾಡ್ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆರೋಗ್ಯ ಸಚಿವ ಯು.ಟಿ.ಖಾದರ್, ಮಾಜಿ ಉಪಮುಖ್ಯಮಂತ್ರಿಯಾದ ಶಾಸಕ ಡಾ.ಸಿ.ಎನ್, ಅಶ್ವತ್ಥನಾರಾಯಣ್, ಚಲನಚಿತ್ರ ನಟ ಡಾಲಿ ಧನಂಜಯ, ಪದ್ಮಶ್ರೀ ಡ. ಸಿ.ಆರ್.ಚಂದ್ರಶೇಖರ್, ಕನ್ನಡಪ್ರಭ ಏಷಿಯಾನೆಟ್ ಸುವರ್ಣನ್ಯೂಸ್ ಸಮೂಹ ಸಂಪಾದಕೀಯ ನಿರ್ದೇಶಕ ರವಿ ಹೆಗಡೆ ಅವರು ಚೇತನ್ ಪ್ರಕಾಶ್ ಕಜೆ ಮತ್ತು ಅವರ ಪತ್ನಿ ಡಾ. ಗೌರಿಪ್ರಸನ್ನ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಕನ್ನಡಪ್ರಭ ಹಲವು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಆರೋಗ್ಯ ಸೇವಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮಹತ್ತರ ಕೊಡುಗೆ ನೀಡಿರುವ ವೈದ್ಯರು ಮತ್ತು ಆರೋಗ್ಯ ಸಂಸ್ಥೆಗಳನ್ನು ಗೌರವಿಸು ಉದ್ದೇಶದಿಂದ `ಹೆಲ್ತ್ಕೇರ್ ಎಕ್ಸಲೆನ್ಸ್ ಅವಾರ್ಡ್ಸ್’ ಅನ್ನು ನೀಡುತ್ತಾ ಬಂದಿದೆ. ಆರೋಗ್ಯ ಕ್ಷೇತ್ರದ ವೃತ್ತಿಪರರು ಸಮಾಜದ ಆರೋಗ್ಯ ಮತ್ತು ಕಲ್ಯಾಣದ ಅಭಿವೃದ್ಧಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಸೇವೆ ಮತ್ತು ಸಮರ್ಪಣೆಗೆ ಯೋಗ್ಯವಾದ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚೇತನ್ ಪ್ರಕಾಶ್ ಅವರ ಪತ್ನಿ ಡಾ. ಗೌರಿಪ್ರಸನ್ನ, ಪುತ್ರಿ ಜೀವಿಕಾ ಕಜೆ, ಪುತ್ರ ಆಯುಷ್ಮಾನ್ ಜೊತೆಗಿದ್ದರು.



























