ಮಂಗಳೂರು: ತಂಗಿಯ ಆತ್ಮಹತ್ಯೆಯಿಂದ ನೊಂದಿದ್ದ ಸಹೋದರನೊಬ್ಬ ಗಲ್ಫ್ನಿಂದ ಮಂಗಳೂರಿಗೆ ಹಿಂತಿರುಗಿದ ಕೆಲವೇ ಗಂಟೆಗಳಲ್ಲಿ ಲಾಡ್ಜ್ ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ದಾರುಣ ಘಟನೆ ನಡೆದಿದೆ.
ಕೇರಳದ ಬೇಕಲ್ ಮೂಲದ ಅರ್ಜುನ್ ಮಹೇಶ್ (24) ಮೃತರು. ಕಳೆದ ಜೂನ್‌ನಲ್ಲಿ ಅವರ ತಂಗಿ ಐಜಾ ಆರ್. ಕೋಚಿಂಗ್ ಸೆಂಟರ್‌ನ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಂಗಿಯ ಸಾವಿನಿಂದ ಅರ್ಜುನ್ ತೀವ್ರವಾಗಿ ನೊಂದಿದ್ದರು ಎನ್ನಲಾಗಿದೆ.
ಭಾನುವಾರ ಗಲ್ಸ್‌ನಿಂದ ವಿಮಾನದ ಮೂಲಕ ಮಂಗಳೂರಿಗೆ ಬಂದಿದ್ದ ಅರ್ಜುನ್ ಬಳಿಕ ನಾಪತ್ತೆಯಾಗಿದ್ದರು. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದರು.ಸೋಮವಾರ ಮಧ್ಯಾಹ್ನ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮರವೂರಿನ ಲಾಡ್ಜ್‌ವೊಂದರ ಕೊಠಡಿಯಲ್ಲಿ ಅರ್ಜುನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಒಂದೇ ಕುಟುಂಬದ ಇಬ್ಬರು ಮಕ್ಕಳು ಕೆಲವೇ ತಿಂಗಳ ಅಂತರದಲ್ಲಿ ದಾರುಣವಾಗಿ ಮೃತಪಟ್ಟಿರುವುದು ಕುಟುಂಬಸ್ಥರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಕಂಬನಿ ಮೂಡಿಸಿದೆ.ಬಜ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.




























