ಉಪ್ಪಿನಂಗಡಿ: ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದ ವ್ಯಕ್ತಿಯ ಕಾರನ್ನು ತಡೆದು, ಆತನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಉಪ್ಪಿನಂಗಡಿ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕಾರ್ಕಳ ಈದು ನಿವಾಸಿ ಶೈಕ್ ಮುಕ್ತಾರ್ (50) ಅವರು ನೀಡಿದ ದೂರಿನಂತೆ, ಕೆಲಸದ ನಿಮಿತ್ತ ಅವರು ಪರಿಚಯಸ್ಥರೊಬ್ಬರ ಅಪ್ರಾಪ್ತ ವಯಸ್ಸಿನ ಮಗಳನ್ನು ಕಾರಿನಲ್ಲಿ ಕರೆದೊಯ್ದು ಹಾಸನದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕಡ ಕಾಪಿನಬಾಗಿಲು ಬಳಿ ಕೆಲವರು ಗುಂಪಾಗಿ ಸೇರಿ ಕಾರನ್ನು ತಡೆದು ನಿಲ್ಲಿಸಿ, ಕಾರಿನಲ್ಲಿದ್ದ ಅಪ್ರಾಪ್ತ ಬಾಲಕಿಯ ಕುರಿತು ವಿಚಾರಿಸಿದ್ದಾರೆ. ಬಳಿಕ ಶೈಕ್ ಮುಕ್ತಾರ್ ಅವರಿಗೆ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 106/2026ರಂತೆ BNSನ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಧನುಷ್ (23), ದಿನೇಶ್ (45), ಪೂರ್ಣಕ್ಷ ಬಿ. (40), ಸೂರಜ್ (25) ಹಾಗೂ ರಂಜಿತ್ ಬಂಡಾರಿ (29) ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ತಾಯಿಯಿಂದ ಪ್ರತಿದೂರು
ಇದೇ ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕಿಯ ತಾಯಿ ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ. ಶೇಕ್ ಮುಕ್ತಾರ್ (52) ಎಂಬಾತ ತನ್ನ ಮಗಳನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ZERO FIR 03/2026ರಂತೆ BNS ಕಲಂ 137(2)ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಘಟನೆಗೆ ಸಂಬಂಧಿಸಿದ ಎರಡೂ ದೂರುಗಳ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




























