ರಾಮಕುಂಜ: ಮನೆಯೊಳಗೆ ವ್ಯಕ್ತಿಯೊಬ್ಬರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಶಾರದಾನಗರದಲ್ಲಿ ಆ.13ರಂದು ನಡೆದಿದೆ.
ಮೂಲತಃ ಕಡಬ ತಾಲೂಕಿನ ಆಲಂಕಾರು ಗ್ರಾಮದ ಕಿನ್ನಿಗೋಳಿ ನಿವಾಸಿ ಸುಂದರ ಶೆಟ್ಟಿ(75ವ.) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇವರು ಕಳೆದ ಹಲವು ವರ್ಷಗಳಿಂದ ರಾಮಕುಂಜ ಗ್ರಾಮದ ಶಾರದಾನಗದರಲ್ಲಿ ಸರಕಾರದಿಂದ ಮಂಜೂರಾದ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿ ಪತ್ನಿಯೊಂದಿಗೆ ವಾಸವಾಗಿದ್ದರು. ಒಂದು ತಿಂಗಳ ಹಿಂದೆ ಇವರ ಪತ್ನಿ ಬೆಂಗಳೂರಿನಲ್ಲಿರುವ ತನ್ನ
ಮಗನ ಮನೆಗೆ ತೆರಳಿದ್ದರು. ಹಾಗಾಗಿ ಸುಂದರ ಶೆಟ್ಟಿಯವರು ಒಬ್ಬರೇ ಮನೆಯಲ್ಲಿದ್ದರು.
ಆ.8ರಂದು ಇವರ ಹಿರಿಯ ಪುತ್ರ ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೋಮಸುಂದರ ಶೆಟ್ಟಿಯವರು ಶಾರದಾನಗರದ ಮನೆಗೆ ತೆರಳಿ ತಂದೆಯನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿ ಬಂದಿದ್ದರು.
ಕಳೆದ ಎರಡು ‘ಮೂರು ದಿನಗಳಿಂದ ಮನೆಯ ಬಾಗಿಲು ಮುಚ್ಚಿರುವುದನ್ನು ಗಮನಿಸಿದ ಸ್ಥಳೀಯರು ಗುರುವಾರ ಮನೆಯ ಹತ್ತಿರ ಹೋದಾಗ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಸೋಮಸುಂದರ ಶೆಟ್ಟಿಯವರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಕಡಬ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು.
ಮನೆಯೊಳಗಿನಿಂದ ಚಿಲಕ ಹಾಕಲಾಕಿತ್ತು. ಬಾಗಿಲು ಮುರಿದು ಒಳ ಪ್ರವೇಶಿಸಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಸುಂದರ ಶೆಟ್ಟಿಯವರು ಚಾಪೆಯಲ್ಲಿ ಮಲಗಿದ ಸ್ಥಿತಿಯಲ್ಲೇ ಮೃತಪಟ್ಟಿರುವುದು ಕಂಡುಬಂದಿದ್ದು, ಅವರು ಮಲಗಿದ್ದಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಸೋಮಸುಂದರ ಶೆಟ್ಟಿಯವರು ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರು ಪತ್ನಿ ಬೇಬಿ, ಪುತ್ರರಾದ ಸೋಮಸುಂದರ ಶೆಟ್ಟಿ, ಶಿವಪ್ರಸಾದ್ ಹಾಗೂ ಪುತ್ರಿ ಗೀತಾಲಕ್ಷ್ಮೀ ಅವರನ್ನು ಅಗಲಿದ್ದಾರೆ.




























