ಬಂಟ್ವಾಳ: ಹಾಸನದಿಂದ ಮಂಗಳೂರು ಕಡೆಗೆ ಕಾರಿನಲ್ಲಿ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಸುಮಾರು ₹1.05 ಕೋಟಿ ಮೌಲ್ಯದ ಮಾದಕವಸ್ತು ಸೇರಿದಂತೆ ವಿವಿಧ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆಗಸ್ಟ್ 16ರ ರಾತ್ರಿ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಮಾದಕವಸ್ತು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ್ ಟಿ. ಅವರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಬಂಟ್ವಾಳ ತಾಲೂಕು ಕಡೇಶಿವಾಲಯ ಗ್ರಾಮದ ಅಮೈ ಬಳಿ KA-01-MA-1284 ನೋಂದಣಿಯ ಕಾರನ್ನು ತಡೆದು ಪರಿಶೀಲಿಸಿದರು.
ಕಾರಿನ ಚಾಲಕನನ್ನು ವಿಚಾರಣೆ ನಡೆಸಿದಾಗ ಆತ ಮಾದಕವಸ್ತು ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಕಾರನ್ನು ತಪಾಸಣೆ ನಡೆಸಿದಾಗ 538.63 ಗ್ರಾಂ MDMA ಹಾಗೂ 99.12 ಗ್ರಾಂ ಕೊಕೈನ್ ಪತ್ತೆಯಾಗಿದೆ.
ಬಂಧಿತನನ್ನು ಬೆಂಗಳೂರು ಕೆಂಗೇರಿ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್ (35) ಎಂದು ಗುರುತಿಸಲಾಗಿದೆ. ಮಾದಕವಸ್ತುಗಳ ಜತೆಗೆ ಖಾಲಿ ಪ್ಲಾಸ್ಟಿಕ್ ಡಬ್ಬಿಗಳು, ಡಿಜಿಟಲ್ ತೂಕದ ಯಂತ್ರ ಸೇರಿದಂತೆ ಇತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಅಂದಾಜಿನಂತೆ ವಶಪಡಿಸಿಕೊಂಡ MDMA ಮೌಲ್ಯ ₹53,86,300 ಹಾಗೂ ಕೊಕೈನ್ ಮೌಲ್ಯ ₹49,56,000 ಆಗಿದ್ದು, ಇತರ ಸೊತ್ತುಗಳ ಮೌಲ್ಯ ಸೇರಿದಂತೆ ಒಟ್ಟು ಅಂದಾಜು ಮೌಲ್ಯ ₹1,05,59,450 ಆಗಿದೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 113/2026, ಕಲಂ 8(C) r/w 22(C), 21(ಬಿ) NDPS Act, 1985 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ಯಶ್ ಕುಮಾರ್ ಶರ್ಮ, ಐಪಿಎಸ್ ಅವರ ಹಾಗೂ ಬಂಟ್ವಾಳ ಗ್ರಾಮಾಂತರ ಠಾಣೆಯ ಪ್ರಭಾರ ಪಿಐ ಅನಂತ ಪದ್ಮನಾಭ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ಮಂಜುನಾಥ್ ಟಿ. ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಅಶೋಕ್, ರಾಘವೇಂದ್ರ, ಪ್ರಶಾಂತ್, ಲೋಕೇಶ್, ಶ್ರೀಧರ್, ನಜೀರ್, ವಿವೇಕ್, ಕುಮಾರ್ ಹಾಗೂ ಉದಯ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತು.




























